ಕೋಲ್ಕತ್ತ: ರಾಜ್ಯ ಚುನಾವಣಾ ಆಯುಕ್ತರಾಗಿ ರಾಜೀವ ಸಿನ್ಹಾ ಸಲ್ಲಿಸಿದ್ದ ಕೆಲಸಕ್ಕೆ ಹಾಜರಿಯಾದ ವರದಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಡಾ. ಸಿ.ವಿ ಆನಂದ ಬೋಸ್ ಅವರು ವಾಪಸ್ ಕಳುಹಿಸಿದ್ದಾರೆ.
ಕೋಲ್ಕತ್ತ: ರಾಜ್ಯ ಚುನಾವಣಾ ಆಯುಕ್ತರಾಗಿ ರಾಜೀವ ಸಿನ್ಹಾ ಸಲ್ಲಿಸಿದ್ದ ಕೆಲಸಕ್ಕೆ ಹಾಜರಿಯಾದ ವರದಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಡಾ. ಸಿ.ವಿ ಆನಂದ ಬೋಸ್ ಅವರು ವಾಪಸ್ ಕಳುಹಿಸಿದ್ದಾರೆ.
ಜುಲೈ 8 ರಂದು ಪಂಚಾಯತ್ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯಪಾಲರಿಂದ ಈ ನಡೆ ವ್ಯಕ್ತವಾಗಿದೆ.
ಈ ತಿಂಗಳ ಆರಂಭದಲ್ಲಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಕೊಲೆ, ಹಿಂಸಾಚಾರ ಮತ್ತು ಘರ್ಷಣೆ ಘಟನೆಗಳ ಕುರಿತು ವಿವರಣೆ ನೀಡುವಂತೆ ಸಿನ್ಹಾ ಅವರಿಗೆ ಸಮನ್ಸ್ ನೀಡಿದ್ದ ರಾಜ್ಯಪಾಲರು, ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿದ್ದರು. ಆದರೆ ಸಿನ್ಹಾ ಅವರು ಹಾಜರಾಗದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 17 ರಂದು ರಾಜಭವನದಲ್ಲಿ ಹಾಜರಾಗುವಂತೆ ಸಿನ್ಹಾ ಅವರಿಗೆ ನಿರ್ದೇಶಿಸಲಾಗಿತ್ತು, ಆದರೆ ಸಿನ್ಹಾ ಅವರು ಪಂಚಾಯತ್ ಚುನಾವಣೆಯ ನಾಮಪತ್ರಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಜೂನ್ 17 ರಂದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಮತ್ತು ಬೇರೆ ಯಾವುದೇ ದಿನದಲ್ಲಿ ಭೇಟಿಗೆ ಅವಕಾಶ ನೀಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ರಾಜ್ಯ ಚುನಾವಣಾ ಆಯುಕ್ತರಾಗಿ ಸಿನ್ಹಾ ಅವರನ್ನು ನೇಮಕ ಮಾಡುವ ಪ್ರಸ್ತಾವಕ್ಕೆ ಜೂನ್ 7 ರಂದು ರಾಜ್ಯಪಾಲರು ಅನುಮೋದನೆ ನೀಡಿದ್ದರು. ನೇಮಕವಾದ ಮರುದಿನವೇ ಸಿನ್ಹಾ ಅವರು ಪಂಚಾಯತ್ ಚುನಾವಣೆಯನ್ನೂ ಘೋಷಣೆ ಮಾಡಿದ್ದರು.