ಕಾಸರಗೋಡು: ರಾಜ್ಯದ ಕರಾವಳಿ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಕೇಂದ್ರದ ಸಹಕಾರ ಮತ್ತು ಬೆಂಬಲ ಅನಿವಾರ್ಯವಾಗಿರುವುದಾಗಿ ಕೇರಳ ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.
ಅವರು ಕಾಸರಗೋಡಿನ ಮಾಡಕ್ಕರ ಬಂದರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಂತ್ರಿಕ ಕಾರಣಗಳಿಂದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಖಾತೆ ಸಚಿವ ಪರ್ಷೋತ್ತಮ್ ರೂಪಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರದ ನೆರವಿನ ಬಗ್ಗೆ ಸಚಿವರು ಕೇಂದ್ರ ತಂಡದೆದುರು ಅಹವಾಲು ಮುಂದಿಟ್ಟರು.
ಕರಾವಳಿ ವಲಯದ ಅಭಿವೃದ್ಧಿಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ನಿಲುವು ವ್ಯಕ್ತವಾಗಿದೆ. ಕೇಂದ್ರ ಮತ್ತು ರಾಜ್ಯದ ಆಡಳಿತ ವಿಭಿನ್ನ ರಾಜಕೀಯ ಹೊಂದಿದ್ದರೂ, ಕೇರಳದ ಸಾಮಾನ್ಯ ಅಭಿವೃದ್ಧಿ ಅದರಲ್ಲೂ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಹಾಯ ಕೇಂದ್ರದಿಂದ ಲಭಿಸುತ್ತಿದೆ. ಮೀನುಗಾರಿಕಾ ವಲಯದ ಅಭಿವೃದ್ಧಿಗಾಗಿ ಹಲವು ಕ್ರಿಯಾ ಯೋಜನೆಗಳನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಗಿದ್ದು, ಕೇಂದ್ರ ಸಮಿತಿಯು ಮೀನುಗಾರಿಕೆ ಬಂದರು, ಫಿಶ್ ಲ್ಯಾಂಡಿಂಗ್ ಕೇಂದ್ರ, ಮಾರುಕಟ್ಟೆ ಮತ್ತು ಕಾಲೋನಿಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಖಾತ್ರಿಪಡಿಸಿರುವುದಾಗಿ ತಿಳಿಸಿದರು.
ಹರಾಜು ಹಾಲ್, ಪಾಕಿರ್ಂಗ್, ಮೀನು ಹರಾಜು ಗೃಹದ ಆಧುನೀಕರಣ, ಕರಾವಳಿ ಹಾನಿ ದುರಸ್ತಿ ಇತ್ಯಾದಿ ಯೋಜನೆಯ ಆಡಳಿತಾತ್ಮಕ ಅನುಮೋದನೆಗಾಗಿ 40 ಕೋಟಿ ರೂ. ಮೊತ್ತದ ಯೋಜನೆಆವರದಿಯನ್ನು ಖೇಂದ್ರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ ಶೇ.60 ಕೇಂದ್ರ ಮತ್ತು ಶೇ.40 ರಷ್ಟು ರಾಜ್ಯ ಸರ್ಕಾರ ಭರಿಸಲಿದ್ದು, ಇದಕ್ಕೆ ಕಏಂದ್ರದ ಅಂಗೀಕಾರ ಲಭಿಸುವ ಭರವಸೆಯಿದೆ. ಕೇಂದ್ರ ಸಚಿವ ಪರ್ಶೋತ್ತಮ್ ರೂಪಾಲಾ ಅವರ ಭೇಟಿಯೊಂದಿಗೆ ಈ ಎಲ್ಲಾ ಯೋಜನೆಗಳನ್ನು ಶೀಘ್ರ ಸಾಕಾರಗೊಳಿಸಲಾಗುವುದು ಎಂದು ತಿಳಿಸಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಎಂ. ರಾಜಗೋಪಾಲನ್, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಿ ಸುವರ್ಣ, ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ,ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್, ಪಡನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ.ಮಹಮ್ಮದ್ ಅಸ್ಲಂ, ಜಿಲ್ಲಾಧಿಕಾರಿ ಕೆ.ಇಭಾಶೇಖರ್, ಮೀನುಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಎನ್.ಎಸ್.ಶ್ರೀಲು, ಬಂದರು ಅಧೀಕ್ಷಕ ಎಂಜಿನಿಯರ್ ಮಹಮ್ಮದ್ ಅನ್ಸಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಾಡಕ್ಕಲ್ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳು ಕೇಂದ್ರ ತಂಡಕ್ಕೆ ಸಮರ್ಪಿಸಿದರು.