ತಿರುವನಂತಪುರಂ: ವಿಪಕ್ಷ ನಾಯಕ ವಿಡಿ ಸತೀಶನ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಪ್ರವಾಹದ ನಂತರ ಅವರ ಕ್ಷೇತ್ರ ಪರವೂರಿನಲ್ಲಿ ವಿ.ಡಿ.ಸತೀಶನ್ ನೇತೃತ್ವದಲ್ಲಿ ಅನುಷ್ಠಾನಗೊಂಡ ‘ಪುನರ್ಜನಿ’ ಯೋಜನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ವಿದೇಶದಿಂದ ಯೋಜನೆಗೆ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ವಿಜಿಲೆನ್ಸ್‍ಗೆ ಸರ್ಕಾರ ಸೂಚಿಸಿದೆ. ಆರೋಪಗಳು ನಿಜವೆಂದು ಕಂಡುಬಂದರೆ, ಅವರ ವಿರುದ್ಧ ವಿಸ್ತೃತ ತನಿಖೆ ನಡೆಸಬಹುದು. ಚಾಲಕುಡಿ ಕಾತಿಕೂಟಂ ಆಕ್ಷನ್ ಕೌನ್ಸಿಲ್ ವಿಡಿ ಸತೀಶನ್ ವಿರುದ್ಧ ದೂರು ದಾಖಲಿಸಿತ್ತು. ಯೋಜನೆಗೆ ಯಾವ ವಿದೇಶಿ ಸಂಸ್ಥೆಯಿಂದ ಹಣವನ್ನು ಪಡೆಯಲಾಗಿದೆ, ಕೇರಳಕ್ಕೆ ಹಣವನ್ನು ಹೇಗೆ ತರಲಾಯಿತು ಮತ್ತು ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆಯೇ ಮುಂತಾದ ವಿಷಯಗಳ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸಲಿದೆ.
ಒಂದು ವರ್ಷದ ಹಿಂದೆ ವಿಜಿಲೆನ್ಸ್ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿತ್ತು. ಪ್ರಾಥಮಿಕ ಪರಿಶೀಲನೆ ನಂತರ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ವಿಜಿಲೆನ್ಸ್ ಸ್ಪೀಕರ್ ಎ.ಎನ್.ಶಂಸೀರ್ ಅವರಿಗೆ ಪತ್ರ ಬರೆದಿತ್ತು. ಆದರೆ ಶಾಸಕರ ಮೇಲೆ ವಿಜಿಲೆನ್ಸ್ ತನಿಖೆ ನಡೆಸಲು ಅವರ ಅನುಮತಿ ಬೇಡ ಎಂದು ಸ್ಪೀಕರ್ ಸರ್ಕಾರಕ್ಕೆ ತಿಳಿಸಿದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ.