ನವದೆಹಲಿ: ಆಂಧ್ರಪ್ರದೇಶದ ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದ ಬಳಿ ಇರುವ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ದೇವಸ್ಥಾನದ ಸಮೀಪವಿರುವ ಫೋಟೋ ಫ್ರೇಮ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಮೂವರು ಬೆಂಕಿಯಲ್ಲಿ ಸಿಲುಕಿರುವ ಶಂಕೆಗಳು ವ್ಯಕ್ತವಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆಯೇ ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು, ಗೋವಿಂದರಾಜ ಸ್ವಾಮಿ ದೇವಸ್ಥಾನದ ರಥದ ಕಡೆಗೆ ವ್ಯಾಪಿಸಿರುವ ಬೆಂಕಿಯನ್ನು ನಂದಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಐದು ಅಂತಸ್ತಿನ ಕಟ್ಟಡದಲ್ಲಿನ ಒಂದು ಮಹಡಿಯಲ್ಲಿರುವ ಈ ಫೋಟೋ ಫ್ರೇಮ್ ಅಂಗಡಿಯಿದ್ದು, ಈ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಂಗಡಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಅಂಗಡಿಯಲ್ಲಿದ್ದ ಕಾರ್ಮಿಕರು ಮತ್ತು ಕಟ್ಟಡದಲ್ಲಿದ್ದ ಇತರರು ಹೊರಗೆ ಓಡಿ ಬಂದಿದ್ದಾರೆ.
ಘಟನೆಯಲ್ಲಿ ಕಟ್ಟಡದ ಮುಂದೆ ನಿಲ್ಲಿಸಿದ್ದ 5 ದ್ವಿಚಕ್ರ ವಾಹನಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ವರದಿಗಳು ತಿಳಿಸಿವೆ.