ಕಾಸರಗೋಡು: ಗಡಿನಾಡ ಭೀಮಕವಿ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯು ಕೊಡಮಾಡುವ ಎರಡನೆಯ ವರ್ಷದ ಪ್ರತಿಷ್ಠಿತ ನಾಡೋಜ ಕಯ್ಯಾರ ಕಿಞಣ್ಣ ರೈ ಪ್ರಶಸ್ತಿಯನ್ನು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ, ಹಿರಿಯ ಲೇಖಕಿ, ಸಂಶೋಧಕಿ ಡಾ. ಪ್ರಮೀಳಾ ಮಾಧವ್ ಅವರಿಗೆ ಪ್ರದಾನ ಮಾಡಲಾಯಿತು.
ಕರ್ನಾಟಕ ಸರ್ಕಾರದ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ ಸಹಕಾರದೊಂದಿಗೆ ನಾಡೋಜ ಕವಿ ಕಯ್ಯಾರರ 108 ನೇ ಜನ್ಮದಿನದ ಅಂಗವಾಗಿ ಇವರ ಹುಟ್ಟೂರು ಕಾಸರಗೋಡಿನ ಕಯ್ಯಾರಿನ ರಾಮಕೃಷ್ಣ ಕಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ್ ಅವರು ಪ್ರಶಸ್ತಿ ವಿತರಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರಾಜೇಶ್. ಜಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಹಿರಿಯ ಸಾಹಿತಿ, ಚಿಂತಕ ಪೆÇ್ರ. ಕೆ. ಇ. ರಾಧಾಕೃಷ್ಣ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಎ. ಆರ್. ಸುಬ್ಬಯ್ಯಕಟ್ಟೆ, ಶಿವರಾಮ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ನಾಡೋಜ ಕವಿ ಕಯ್ಯಾರರ ಹೆಸರಿನ ಪ್ರಶಸ್ತಿ ಲಭಿಸಿರುವುದು ಅತೀವ ಸಂತೋಷವನ್ನುoಟು ಮಾಡಿದೆ ಪ್ರಶಸ್ತಿ ವಿಜೇತೆ ಡಾ. ಪ್ರಮಿಳಾ ಮಾಧವ್ ತಿಳಿಸಿದರು. ಲೇಖಕ, ಪತ್ರಕರ್ತ ರವಿ ನಾಯ್ಕಾಪು ಅವರು ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಮಂಜುನಾಥ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಸ್ವಾಗತಿಸಿದರು. ಜೆಡ್. ಎ. ಕಯ್ಯಾರ್ ವಂದಿಸಿದರು.