ಕಾಸರಗೋಡು: ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗ ಅತಿ ಶೀಘ್ರ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಜಿಲ್ಲಾ ಮತ್ತು ಸ್ಥಳೀಯಾಡಳಿತ ಮಟ್ಟದ ಆರೋಗ್ಯ ಮುಂಜಾಗ್ರತಾ ಸಭೆಗಳನ್ನು ಪೂರ್ವಭಾವಿಯಾಗಿ ಆಯೋಜಿಸಲಾಗಿದೆ. ವಾರ್ಡ್ ಮಟ್ಟದ ಆರೋಗ್ಯ ಮತ್ತು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಯೋಜಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ನೈರ್ಮಲ್ಯ ಸಮಿತಿಗಳನ್ನು ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗಿದ್ದು, ಪ್ರಮುಖ ಆಸ್ಪತ್ರೆಗಳಲ್ಲಿ ವಿಶೇಷ ಜ್ವರ ವಿಭಾಗಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ಸಂಸ್ಥೆಗಳಲ್ಲಿ ಬ್ಲೀಚಿಂಗ್ ಪೌಡರ್ ಮತ್ತು ಸೊಳ್ಳೆ ನಿವಾರಕ ರಾಸಾಯನಿಕಗಳು ಸಹ ಲಭ್ಯವಿದೆ. ಪ್ರಯೋಗಾಲಯಗಳಲ್ಲಿ ಅಗತ್ಯ ಸೌಕರ್ಯ ಒದಗಿಸುವುದರ ಜತೆಗೆ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು.
ಡೆಂಘೆ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ರೋಗ ತಡೆಗಟ್ಟುವ ಅಗತ್ಯ ಕ್ರಮಗಳನ್ನು ಸಕಾಲಿಕವಾಗಿ ಆಯೋಜಿಸಲಾಗುತ್ತಿದೆ. ಜ್ವರ ಸಮೀಕ್ಷೆ, ರೋಗ ಮೂಲ ಪತ್ತೆಹಚ್ಚಿ ಇವುಗಳನ್ನು ನಾಶಗೊಳಿಸುವ ಚಟುವಟಿಕೆಗಳು, ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಸಿಂಪಡಣೆ ಮತ್ತು ಫಾಗಿಂಗ್, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲಿ ಜ್ವರ ತಡೆಗೆ ಅಗತ್ಯವಿರುವ ಡಾಕ್ಸಿಸೈಕ್ಲಿನ್ ಮಾತ್ರೆಗಳ ವಿತರಣೆಯನ್ನು ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಜನರು ಮತ್ತು ರೋಗ ವ್ಯಾಪನಾ ಅಪಾಯವಿರುವ ಪ್ರದೇಶಗಳಲ್ಲಿ ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ಯೋಜನೆ ರೂಪಿಸಲು ಆಯಾ ಶಾಸಕರ ನೇತೃತ್ವದಲ್ಲಿ ಜುಲೈ 3, 4 ಮತ್ತು 8 ರಂದು ಕ್ಷೇತ್ರ ಮಟ್ಟದಲ್ಲಿ ಸ್ಥಳೀಯಾಡಳಿತ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಆಯೋಜಿಸಲೂ ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಮಳೆಗಾಲದ ರೋಗ ತಡೆ ಚಟುವಟಿಕೆ ತ್ವರಿತಗೊಳಿಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಸೂಚನೆ ಹಾಗೂ ಕಾರ್ಯಚಟುವಟಿಕೆಗಳಿಗೆ ಎಲ್ಲ ವರ್ಗದ ಜನತೆ ಸಹಕರಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಡಾ.ಎ.ವಿ.ರಾಮದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.