ಕೈರೋ: ಮೊದಲ ಬಾರಿಗೆ ಈಜಿಪ್ಟ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈಜಿಪ್ಟ್ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ತೆರಳುತ್ತಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಅರಬ್ ದೇಶದ ಅತ್ಯುನ್ನತ ಗೌರವ 'ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ಪ್ರದಾನ ಮಾಡಲಾಗಿದೆ.
"ನನ್ನ ಈಜಿಪ್ಟ್ ಭೇಟಿಯು ಐತಿಹಾಸಿಕವಾಗಿದೆ. ಇದು ಭಾರತ-ಈಜಿಪ್ಟ್ ಸಂಬಂಧಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವಾಗಲಿದೆ. ನಾನು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಸರ್ಕಾರ ಮತ್ತು ಈಜಿಪ್ಟ್ ಜನರಿಗೆ ಧನ್ಯವಾದ ಹೇಳುತ್ತೇನೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಧ್ಯಕ್ಷ ಅಬ್ದೆಲ್ ಫತ್ತಾಹ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಈಜಿಪ್ಟ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. 1997ರ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.