ಅಹಮದಾಬಾದ್: ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿರುವ 16 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮನುಸ್ಮೃತಿ ಉಲ್ಲೇಖಿಸಿದ ಗುಜರಾತ್ ಹೈಕೋರ್ಟ್, ಈ ಹಿಂದೆ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17 ವರ್ಷ ದಾಟುವ ಮುನ್ನವೇ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಸಂಗತಿಯಾಗಿತ್ತು ಎಂದು ಹೇಳಿದೆ.
ಏಳು ತಿಂಗಳ ಗರ್ಭಿಣಿಯಾಗಿರುವ ಅತ್ಯಾಚಾರ ಸಂತ್ರಸ್ತೆ, ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಮೀರ್ ದವೆ ಅವರು, ಆರೋಪಿ ಮತ್ತು ಬಾಲಕಿಯ ನಡುವೆ "ರಾಜಿ" ಸಾಧ್ಯತೆಯನ್ನು ಪರಿಶೀಲಿಸಲು ಆರೋಪಿಯನ್ನು ಹಾಜರುಪಡಿಸುವಂತೆ ಗುರುವಾರ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ರಾಜ್ಯದ ಮೊರ್ಬಿ ಪಟ್ಟಣದ ಉಪ ಜೈಲಿನಲ್ಲಿರುವ 23 ವರ್ಷದ ಆರೋಪಿಯನ್ನು ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿ ತನಗೆ ಮದುವೆಯಾಗಿ ಎರಡು ವರ್ಷ ಕಳೆದಿದ್ದು, ತನ್ನ ಪತ್ನಿಯೂ ಗರ್ಭಿಣಿಯಾಗಿದ್ದಾಳೆ ಎಂದು ತಿಳಿಸಿದನು.
ಈಗ ರಾಜಿ ಸಾಧ್ಯತೆಯನ್ನು ನ್ಯಾಯಾಲಯ ತಳ್ಳಿಹಾಕಿದೆ ಎಂದು ಅರ್ಜಿದಾರ ಸಿಕಂದರ್ ಸೈಯದ್ ಪರ ವಕೀಲರು ತಿಳಿಸಿದ್ದಾರೆ.
"ಬಾಲಕಿಯ ವೈದ್ಯಕೀಯ ವರದಿಯ ಆಧಾರದ ಮೇಲೆ ಆಕೆಯ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಸೋಮವಾರ ಈ ವಿಷಯವನ್ನು ಮತ್ತಷ್ಟು ವಿಚಾರಣೆ ನಡೆಸಲಿದ್ದು, ಬಾಲಕಿಯ ಅಭಿಪ್ರಾಯ ತಿಳಿಯಲು ತಂದೆ ಸಮಯಾವಕಾಶ ನೀಡಿದೆ" ಎಂದು ಸೈಯದ್ ಅವರು ಹೇಳಿದ್ದಾರೆ.
ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯ, ಒಂದು ಕಾಲದಲ್ಲಿ ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17 ವರ್ಷ ತುಂಬುವ ಮೊದಲು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು. ಈ ಕುರಿತು ಮನುಸ್ಮೃತಿ ಓದುವಂತೆ ನ್ಯಾಯಾಧೀಶ ಸಮೀರ್ ದವೆ ಅವರು ವಕೀಲರಿಗೆ ಸಲಹೆ ನೀಡಿದ್ದರು.