ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣದ ವಠಾರದಿಂದ ಸ್ಥಳಾಂತರಿಸಿ ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನೆಡಲಾದ ಮಾವಿನ ಮರದ ಒಂದನೇ ವರ್ಷವನ್ನು ಗುರುವಾರ ಆಚರಿಸಲಾಯಿತು. ಕೇರಳದ ಖ್ಯಾತ ಕವಯಿತ್ರಿ ಎಂ. ಸುಗದ ಕುಮಾರಿ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ ನೆಟ್ಟಿದ್ದ 'ಪಯಸ್ವಿನಿ'ಹೆಸರಿನ ಈ ಮಾವಿನ ಮರವನ್ನು ಬೃಹತ್ ಜೆಸಿಬಿ ಹಾಗೂ ಕ್ರೇನ್ ಸಹಾಯದಿಂದ 2022 ಜೂ. 15ರಂದು 'ಆಪರೇಶನ್ ಪಯಸ್ವಿನಿ' ಮೂಲಕ ತೆರವುಗೊಳಿಸಿ ಶಾಲಾ ಮೈದಾನದಲ್ಲಿ ನೆಡಲಾಗಿತ್ತು.
2006ರಲ್ಲಿ ಸುಗದಕುಮಾರಿ ಅವರು ಕಾರ್ಯಕ್ರಮವೊಂದರಲ್ಲಿ ನೆನಪಿಗಾಗಿ ಮಾವಿನ ಸಸಿಯನ್ನು ನೆಟ್ಟು ಬೆಳೆಸಿದ್ದು, ಹಲವು ರೆಂಬೆಗಳಿಂದ ಬೆಳೆದು ನಿಂತ 16ವರ್ಷ ಪ್ರಾಯದ ಈ ಮರವನ್ನು ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವುಗೊಳಿಸಬೇಕಾಗಿ ಬಂದಿತ್ತು. ಆಪರೇಶನ್ ಪಯಸ್ವಿನಿ ಕಾರ್ಯಾಚರಣೆಯನ್ವಯ ದೊಡ್ಡ ಕೊಂಬೆಗಳನ್ನು ಕತ್ತರಿಸಿ ಶಿಲೀಂಧ್ರ ಸೋಂಕು ತಡೆಗಟ್ಟಲು ವಿಶೇಷ ಮಿಶ್ರಣವನ್ನು ಲೇಪಿಸುವ ಮೂಲಕ ಶಾಲಾ ವಠಾರದಲ್ಲಿ ನೆಡಲಾಗಿತ್ತು. ಚಿಗುರೊಡೆದು ಸುಂದರವಾಗಿ ಬೆಳೆದುನಿಂತ ಮಾವಿನ ಮರಕ್ಕೆ ವಿದ್ಯಾರ್ಥಿಗಳು ಹೂವಿನಹಾರ ಹಾಕಿ ನಮಿಸುವ ಮೂಲಕ ಮರ ನೆಟ್ಟ ಒಂದನೇ ವಾರ್ಷಿಕವನ್ನು ಗುರುವಾರ ಆಚರಿಸಿಕೊಂಡರು.