ಕಾಸರಗೋಡು: ಸಾಗರ್ ಪರಿಕ್ರಮ ಯಾತ್ರೆಯ ಅಂಗವಾಗಿ ಪಿಎಂಎಂಎಸ್‍ವೈ ವತಿಯಿಂದ ಕಾಞಂಗಾಡ್ ಒಯಿಞವಳಪ್ ಕಡಪುರದ ಮಲಬಾರ್ ರೆಸಾರ್ಟ್‍ನಲ್ಲಿ ಫಲಾನುಭವಿಗಳ ಸಭೆ ನಡೆಯಿತು. ಸಂಸದ ರಾಜಮೋಹನ್ ಉನ್ಣೀತ್ತಾನ್ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕರಾವಳಿ ಮೀನುಗಾರರು ಹಾಗೂ ಮೀನುಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಮೀನುಗಾರಿಕಾ ಸಚಿವ ಪರ್ಷೋತ್ತಮ್ ರೂಪಾಲಾ ಅವರೊಂದಿಗೆ ಚರ್ಚೆ ನಡೆಸಿದ್ದು, ಸೂಕ್ತ ಪರಿಹಾರ ಹಾಗೂ ನೆರವಿನ ಭರವಸೆ ಲಭಿಸಿರುವುದಾಗಿ ತಿಳಿಸಿದರು. ಪುನರ್ಗೆಹಮ್ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು, ವಿಮಾ ರಕ್ಷಣೆ, ಮೀನುಗಾರರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದ ನೆರವಿನ ಅಗತ್ಯವಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಡಾ. ಸಿ. ಸುವರ್ಣ ಯೋಜನೆ ಬಗ್ಗೆ ವಿವರಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಅಜಾನೂರು ಪಂಚಾಯತ್ ಅಧ್ಯಕ್ಷೆ ಟಿ.ಶೋಭಾ, ವಾರ್ಡ್ ಕೌನ್ಸಿಲರ್ ಕೆ.ಕೆ.ಬಾಬು, ಮೀನುಗಾರಿಕಾ ಹೆಚ್ಚುವರಿ ನಿರ್ದೇಶಕ ಎನ್.ಎಸ್.ಶ್ರೀಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕರಾವಳಿಯ ಮೀನುಗಾರರು ಭಾಗವಹಿಸಿದ್ದರು.