ಕೊಯಮತ್ತೂರು: ಕಳೆದ ವಾರ ಡಿಎಂಕೆ ಸಂಸದೆ ಕನಿಮೋಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದ ಹಿನ್ನೆಲೆಯಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಮಹಿಳಾ ಬಸ್ ಚಾಲಕಿಗೆ ನಟ-ರಾಜಕಾರಣಿ ಕಮಲ್ ಹಾಸನ್ ಸೋಮವಾರ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಗರದ ಮೊದಲ ಮಹಿಳಾ ಬಸ್ ಚಾಲಕಿಯಾಗಿರುವ ಶರ್ಮಿಳಾ ಅವರಿಗೆ 'ಕಮಲ್ ಪನ್ಬಟ್ಟು ಮೈಯಂ' (ಕಮಲ್ ಕಲ್ಚರಲ್ ಸೆಂಟರ್) ವತಿಯಿಂದ ಚಾಲಕ-ಉದ್ಯಮಿಯಾಗಲು ಅನುವು ಮಾಡಿಕೊಡಲು ಈ ಕಾರನ್ನು ನೀಡಲಾಗಿದೆ ಎಂದು ಮಕ್ಕಳ್ ನಿಧಿ ಮೈಯಂ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಕೆಯ ವಯಸ್ಸಿನ ಮಹಿಳೆಯರಿಗೆ ಉತ್ತಮ ಉದಾಹರಣೆಯಾಗಿದ್ದ ಶರ್ಮಿಳಾ ಕುರಿತ ಇತ್ತೀಚಿನ ಚರ್ಚೆಯ ಬಗ್ಗೆ ನಾನು ದುಃಖಿತನಾಗಿದ್ದೆ. ಶರ್ಮಿಳಾ ಕೇವಲ ಚಾಲಕಿಯಾಗಿ ಉಳಿಯಬಾರದು. ಅನೇಕ ಶರ್ಮಿಳಾರನ್ನು ಸೃಷ್ಟಿಸಬೇಕೆಂಬುದು ನನ್ನ ನಂಬಿಕೆ'. ಆಕೆ ಈಗ ಕಾರನ್ನು ಬಾಡಿಗೆ ಸೇವೆಗಾಗಿ ಬಳಸುತ್ತಾಳೆ ಮತ್ತು ಮುಂದೆ ಉದ್ಯಮಿಯಾಗುತ್ತಾಳೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ, ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಗಾಂಧಿಪುರಂನಿಂದ ಕೊಯಮತ್ತೂರಿನ ಪೀಲಮೇಡುವಿಗೆ ಕನಿಮೊಳಿ ಪ್ರಯಾಣಿಸಿದ್ದರು. ಈ ವೇಳೆ ಅವರ ಬಳಿ ಟಿಕೆಟ್ ಇದ್ದರೂ ಡಿಎಂಕೆ ಸಂಸದರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಕಂಡಕ್ಟರ್ ಜೊತೆಗೆ ವಾಗ್ವಾದ ನಡೆದಿತ್ತು. ಅಲ್ಲದೇ ಪ್ರಚಾರಕ್ಕಾಗಿ ಶರ್ಮಿಳಾ ಈ ರೀತಿ ಮಾಡಿದ್ದಾರೆ ಎಂಬ ಆರೋಪದ ನಂತರ ಚಾಲಕಿ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು.