ಅಮೆರಿಕಾ: ಕಳೆದ ಜೂನ್ 18ರಂದು ಟೈಟಾನಿಕ್ (Titanic) ಹಡಗಿನ ಅವಶೇಷ ನೋಡಲು ಹೋಗಿದ್ದ ಜಲಂತರ್ಗಾಮಿ ಸಮುದ್ರದಲ್ಲಿ ನಾಪತ್ತೆಯಾಗಿ ಐದು ಜನ ಪ್ರಖ್ಯಾತ ಉದ್ಯಮಿಗಳು ಸಾವನ್ನಪ್ಪಿದ್ದರು. ಕಾಣೆಯಾದ ಮರು ಕ್ಷಣದಿಂದಲೇ ಪತ್ತೆಯಾಗೋದು ಬಿಡಿ, ಜಲಂತರ್ಗಾಮಿ ಎಲ್ಲಿದೆ ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ. ಅದಾಗ್ಯೂ ಬಿಡದೆ, ಹುಡುಕಾಟ ಮುಂದುವರೆಸಿದ್ದು, ಇದೀಗ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಹೊರ ತೆಗೆಯಲಾಗಿದೆ.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಅಟ್ಲಾಂಟಿಕ್ ಸಾಗರಕ್ಕೆ ತೆರಳಿದ್ದ ಟೈಟಾನ್ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಯುಎಸ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬುಧವಾರ ಹೊರ ತೆಗೆದು ಕೆನಡಾದ ಸೇಂಟ್ ಜಾನ್ಸ್ ಬಂದರಿಗೆ ತಂದಿದ್ದಾರೆ. ಜಲಾಂತರ್ಗಾಮಿಯ ಅವಶೇಷಗಳು ಟೈಟಾನಿಕ್ ಅವಶೇಷಗಳಿಂದ 1600 ಅಡಿ ದೂರದಲ್ಲಿ ಪತ್ತೆಯಾಗಿದ್ದವು.
ಬುಧವಾರ ಸಿಕ್ಕಿದ ಜಲಾಂತರ್ಗಾಮಿಯ ಅವಶೇಷಗಳ ಜೊತೆಗೆ ಪ್ರವಾಸಿಗರ ದೇಹದ ಭಾಗಗಳು ಕೂಡ ದೊರೆತಿವೆ ಎಂದು ತಿಳಿದು ಬಂದಿದ್ದು, ಜಲಂತರ್ಗಾಮಿ ಸ್ಫೋಟಗೊಂಡ ಪರಿಣಾಮ ಅದರಲ್ಲಿದ್ದ ಐವರು ಕೂಡ ಸಾವನ್ನಪ್ಪಿದ್ದರು. ಎಲ್ಲೆಂದರಲ್ಲಿ ಹುಡುಕಾಡಿದ ಬಳಿಕ ಜೂನ್ 23 ರಂದು ಟೈಟಾನಿಕ್ ಅವಶೇಷಗಳಿಂದ 1600 ಅಡಿ ದೂರದಲ್ಲಿ ಜಲಾಂತರ್ಗಾಮಿ ಪತ್ತೆಯಾಗಿದ್ದವು. ಈ ನೌಕೆಯಲ್ಲಿ ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಹಾಗೂ ಅವರ ಪುತ್ರ ಹಾಗೂ ಸ್ಟಾಕ್ಟನ್ ರಶ್ ಸೇರಿದಂತೆ ಐದು ಜನರು ಇದ್ದರು.
ಸಮುದ್ರದ ತಳದಿಂದ ಜಲಂತರ್ಗಾಮಿ ಮತ್ತು ಮಾನವನ ಅವಶೇಷಗಳು ಹಾಗೂ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟದ ಬಗ್ಗೆ ಕೋಸ್ಟ್ ಗಾರ್ಡ್ ಮೆರೈನ್ ಬೋರ್ಡ್ ಆಫ್ ಇನ್ವೆಸ್ಟಿಗೇಶನ್ ಅನ್ನು ಕರೆಯಲಾಗಿದೆ. ಆ ಬಳಿಕ ಸ್ಫೋಟಗೊಂಡಿರುವುದರ ಬಗ್ಗೆ ಉನ್ನತಮಟ್ಟದ ತನಿಖೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.