ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕುಸ್ತಿ ಪಟು ಮತ್ತು ಬಿಜೆಪಿ ನಾಯಕಿ ಬಬಿತಾ ಫೋಗಟ್ ಅವರು ತಮ್ಮ ಸ್ವಾರ್ಥಕ್ಕಾಗಿ ಕುಸ್ತಿಪಟುಗಳನ್ನು ಬಳಸಿಕೊಳ್ಳಲು ಮತ್ತು ಪ್ರತಿಭಟನೆ ದುರ್ಬಲಗೊಳಿಸಲು ಯತ್ನಿಸಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.

ಬಬಿತಾ ಹಾಗೂ ಬಿಜೆಪಿ ನಾಯಕ ತೀರತ್ ರಾಣಾ ಅವರು ಜಂತರ್ ಮಂತರ್‌ನ ಪ್ರತಿಭಟನೆಯಲ್ಲಿ ಭಾಗವಹಿಸಲು ಆರಂಭದಲ್ಲಿ ಪೊಲೀಸರಿಂದ ಅನುಮತಿ ಪಡೆದಿದ್ದರು. ಆದರೆ, ನಂತರದಲ್ಲಿ ಈ ವೇದಿಕೆಯನ್ನು ಯಾವುದೇ ಪಕ್ಷಗಳು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಾರದೆಂದು ಸಲಹೆ ನೀಡಲು ಪ್ರಾರಂಭಿಸಿದರು ಎಂದು ಸಾಕ್ಷಿ ಮತ್ತು ಅವರ ಪತಿ, ಕುಸ್ತಿಪಟು ಸತ್ಯವ್ರತ ಕಾದಿಯಾನ್ ಶನಿವಾರ ಆರೋಪಿಸಿದ್ದು, ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ತೀರತ್ ರಾಣಾ ಮತ್ತು ಬಬಿತಾ ಫೋಗಟ್ ಅವರು ತಮ್ಮ ಸ್ವಾರ್ಥಕ್ಕಾಗಿ ಕುಸ್ತಿ ಪಟುಗಳನ್ನು ಬಳಸಿಕೊಳ್ಳಲು ಯತ್ನಿಸಿದರು. ನಾವು ಅವರಿಂದ ಬಚಾವಾದೆವು. ಕುಸ್ತಿಪಟುಗಳು ತೊಂದರೆ ಅನುಭವಿಸುತ್ತಿದ್ದಾಗ ಅವರು ಸರ್ಕಾರದ ಜೊತೆ ಸೇರಿಕೊಂಡರು. ನಾವು ಖಂಡಿತವಾಗಿಯೂ ತೊಂದರೆಯಲ್ಲಿದ್ದೇವೆ' ಎಂದು ಸಾಕ್ಷಿ ಮಲಿಕ್ ಭಾನುವಾರ ಟ್ವೀಟ್ ಮಾಡಿದ್ದಾರೆ.
'ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಳೆದ ಕೆಲವು ತಿಂಗಳುಗಳಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಹೋರಾಟವು ರಾಜಕೀಯ ಮತ್ತು ಸರ್ಕಾರದ ವಿರುದ್ಧವಲ್ಲ' ಎಂದು ಸತ್ಯವ್ರತ ಕಾದಿಯಾನ್ ಹೇಳಿದ್ದಾರೆ.