ಕಾಸರಗೋಡು|: ಚೆಮ್ನಾಡ್ ಗ್ರಾಮ ಪಂಚಾಯಿತಿ ವತಿಯಿಂದ ಸಂಪೂರ್ಣ ತ್ಯಾಜ್ಯ ನಿರ್ವಹಣೆಯ ಉದ್ದೇಶದಿಂದ ಆರಂಭಿಸಿರುವ 'ಉತ್ತಮ ಮನೆ-ಉತ್ತಮ ನಾಡು: ಸೌಂದರ್ಯಯುತ ಚೆಮ್ನಾಡ್'ಯೋಜನೆಯನ್ವಯ ಹಸಿರು ಕ್ರಿಯಾಸೇನೆ ಕಳೆದ ಒಂದು ವರ್ಷದಲ್ಲಿ ಮುನ್ನೂರು ಟನ್‍ಗಿಂತಲೂ ಹೆಚ್ಚು ತ್ಯಾಜ್ಯ ಸಂಗ್ರಹಿಸಿದೆ. ಮನೆ, ವ್ಯಾಪಾರಿ ಸಂಸ್ಥೆಗಳಿಂದ ಹಸಿರು ಕ್ರಿಯಾ ಸೇನೆ ಆರು ರೌಂಡ್ ನಡೆಸಿರುವ ಪರ್ಯಟನೆ ಮೂಲಕ ಸಂಗ್ರಹಿಸಿರುವ ತ್ಯಾಜ್ಯ ಇದಾಗಿದೆ ಎಂದು ಚೆಮ್ಮನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ತಿಳಿಸಿದ್ದಾರೆ.
ಮೇ 2022 ರಿಂದ ಪ್ರಾರಂಭವಾಗಿ ಜೂನ್ 2023 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ, ಪಂಚಾಯತ್‍ನ 81% ಮನೆಗಳು ಮತ್ತು 95% ಅಂಗಡಿಗಳಿಂದ ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸುವ ಮೂಲಕ ಹಸಿರು ಕ್ರಿಯಾ ಸೇನೆ ಸಂಗ್ರಹಿಸಿದೆ.
ಈ ಹಿಂದೆ ರಸ್ತೆ ಬದಿ ಎಸೆಯುತ್ತಿದ್ದ ಹಾಗೂ ಸುಟ್ಟು ನಾಶಗೊಳಿಸಲಾಗುತ್ತಿದ್ದ ಕಸವನ್ನು ಈಗ ಪಂಚಾಯಿತಿ ವತಿಯಿಂದ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಲಾದ ತ್ಯಾಜ್ಯವನ್ನು ಕೋಝಿಕ್ಕೋಡ್ ಮೂಲದ ಗ್ರೀನ್ ವಮ್ರ್ಸ್ ಕಂಪನಿಗೆ ಹಸ್ತಾಂತರಿಸುತ್ತಿದೆ. ಚೆಮ್ನಾಡನ್ನು ತ್ಯಾಜ್ಯ ಮುಕ್ತ ಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಘಟಕ ಸಂಸ್ಥೆಗಳಲ್ಲಿ ಸಾಕ್ ಪಿಟ್ ನಂತಹ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಿದ್ಧಪಡಿಸಿ ಮುಖ್ಯರಸ್ತೆಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಪ್ರಮುಖ ಕೇಂದ್ರಗಳಲ್ಲಿ ತ್ಯಾಜ್ಯ ಸಉರಿಯುವುದನ್ನು ತಡೆಗಟ್ಟಲು ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆಯನ್ನೂ ಪಂಚಾಯಿತಿ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸದ ಹಾಗೂ ಹಸಿರು ಕ್ರಿಯಾಸೇನೆಯೊಂದಿಗೆ ಸಹಕರಿಸದವರ ವಿರುದ್ಧ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದೂ ತಿಳಿಸಿದರು.