ತಿರುವನಂತಪುರಂ: ಎಐ ಕ್ಯಾಮೆರಾಗಳು ಕಾರ್ಯಾರಂಭ ಮಾಡಿದ ನಂತರ ಕೇರಳದಲ್ಲಿ ರಸ್ತೆ ಅಪಘಾತ ಪ್ರಕರಣದಲ್ಲಿ ಉಂಟಾಗುವ ಸಾವಿನ ಸಂಖ್ಯೆ ಇಳಿಕೆಯಾಗಿದೆ ಎಂದು ಕೇರಳದ ಸಾರಿಗೆ ಸಚಿವ ಆಯಂಟನಿ ರಾಜು ಹೇಳಿದರು.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇರಳದಲ್ಲಿ 'ಸೇಫ್ ಕೇರಳ' ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
'ಜೂನ್ 5ರಿಂದ 8 ರವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ 3,52,730 ಪ್ರಕರಣಗಳು ಎಐ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ' ಎಂದು ತಿಳಿಸಿದರು.
'ಸಂಚಾರ ಉಲ್ಲಂಘನೆಯನ್ನು ಖಾತರಿಪಡಿಸದ ಕೆಲ್ಟ್ರಾನ್(ಕೇರಳ ಸ್ಟೇಟ್ ಇಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್) ಸುಮಾರು 19,790 ಪ್ರಕರಣಗಳನ್ನು ಸಮಗ್ರ ಸಾರಿಗೆ ಮೇಲ್ವಿಚಾರಣಾ ವ್ಯವಸ್ಥೆಗೆ ಅಪ್‌ಲೋಡ್ ಮಾಡಿದೆ. ಮೋಟಾರು ವಾಹನ ಇಲಾಖೆ ನಿಯಮ ಉಲ್ಲಂಘನೆ ಮಾಡಿರುವ 10,457 ಮಂದಿಗೆ ದಂಡ ಪಾವತಿಸುವಂತೆ ಚಲನ್ ನೀಡಲಾಗಿದೆ' ಎಂದರು.
'ಎಐ ಕ್ಯಾಮೆರಾ ಪತ್ತೆ ಮಾಡಿ ಮಾಹಿತಿ ನೀಡಿದ ಸಂಚಾರ ಉಲ್ಲಂಘನೆ ಮಾಡಿದರವರ ಪೈಕಿ, ಕಾರಿನಲ್ಲಿ ಸೀಲ್ಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸಿದ 7,896 ಪ್ರಕರಣ, ಹೆಲ್ಮೆಟ್ ಧರಿಸಿದೆ ಸವಾರಿ ಮಾಡಿದ 6,153 ಪ್ರಕರಣಗಳು ಮತ್ತು ಹೆಲ್ಮೆಟ್ ಧರಿಸದ ಹಿಂಬದಿ ಸವಾರರ 715 ಪ್ರಕರಣಗಳು ಸೇರಿವೆ. ಅಲ್ಲದೇ ವಿಐಪಿ ಕಾರುಗಳು ಸೇರಿದಂತೆ 56 ಸರ್ಕಾರಿ ವಾಹನಗಳು ಸಂಚಾರ ಉಲ್ಲಂಘನೆ ಮಾಡಿರುವುದನ್ನು ಕ್ಯಾಮೆರಾಗಳು ಪತ್ತೆ ಮಾಡಿದ್ದು, ಇಲ್ಲಿಯವರೆಗೆ 10 ಮಂದಿಗೆ ದಂಡ ಪಾವತಿಸುವಂತೆ ಚಲನ್ ನೀಡಲಾಗಿದೆ' ಎಂದು ಅವರು ಹೇಳಿದರು.
ಈ ಹಿಂದೆ 232 ಕೋಟಿ ವೆಚ್ಚದ 'ಸೇಫ್ ಕೇರಳ' ಯೋಜನೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. 2020ರಲ್ಲಿ 'ಸೇಫ್ ಕೇರಳ' ಯೋಜನೆಯ ಸಲುವಾಗಿ ಸರ್ಕಾರವು ಕೆಲ್ಟ್ರಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, 2023 ಏಪ್ರಿಲ್‌ನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.