ನವದೆಹಲಿ: ಕೇಂದ್ರ ಸರ್ಕಾರ 15 ಲಕ್ಷ ಟನ್ ಗೋಧಿಯನ್ನು ಈ ತಿಂಗಳು ಹರಾಜು ಹಾಕಲು ನಿರ್ಧರಿಸಿದೆ. ಆದರೆ ಕೇಂದ್ರ ಸರ್ಕಾರ ಹೊಂದಿರುವ ಆಹಾರ ಧಾನ್ಯದ ಬಿಡ್ಡಿಂಗ್ ನಲ್ಲಿ ರಾಜ್ಯ ಸರ್ಕಾರಗಳು ಪಾಲ್ಗೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿರುವುದು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ: ಕೇಂದ್ರ ಸರ್ಕಾರ 15 ಲಕ್ಷ ಟನ್ ಗೋಧಿಯನ್ನು ಈ ತಿಂಗಳು ಹರಾಜು ಹಾಕಲು ನಿರ್ಧರಿಸಿದೆ. ಆದರೆ ಕೇಂದ್ರ ಸರ್ಕಾರ ಹೊಂದಿರುವ ಆಹಾರ ಧಾನ್ಯದ ಬಿಡ್ಡಿಂಗ್ ನಲ್ಲಿ ರಾಜ್ಯ ಸರ್ಕಾರಗಳು ಪಾಲ್ಗೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿರುವುದು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ತನ್ನ ಗೋದಾಮುಗಳಲ್ಲಿ 72.5 ದಶಲಕ್ಷ ಟನ್ ಆಹಾರಧಾನ್ಯಗಳನ್ನು ಹೊಂದಿದೆ. ಹಣದುಬ್ಬರ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಈ ಹೆಚ್ಚುವರಿ ಸಂಗ್ರಹವನ್ನು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡುವುದು ಕೂಡಾ ಸೇರಿದೆ. ಆದರೆ ಆಹಾರಧಾನ್ಯ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ಸಂಗ್ರಹಿಸಿ ಇಡಬಹುದಾದ ಧಾನ್ಯ ಪ್ರಮಾಣದ ಮೇಲೆ ಮಿತಿ ವಿಧಿಸಲಾಗಿದೆ.
ಜೂನ್ 13ರಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದಂತೆ ಈ ಆಹಾರಧಾನ್ಯಗಳ ಮಾರಾಟಕ್ಕೆ ಭಾರತದ ಆಹಾರ ನಿಗಮ ನಡೆಸುವ ಹರಾಜಿನಲ್ಲಿ ರಾಜ್ಯ ಸರ್ಕಾರಗಳು ಪಾಲ್ಗೊಳ್ಳುವಂತಿಲ್ಲ.
ಕರ್ನಾಟಕದಂತಹ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಕೇಂದ್ರದ ನಡೆಯನ್ನು ಟೀಕಿಸಿವೆ. ಕೇಂದ್ರ ಸರ್ಕಾರ ವಿವಿಧ ಸಚಿವಾಲಯಗಳ ಸಲಹೆ ಪಡೆದು ಹೊಸ ಆಹಾರ ನೀತಿ ರೂಪಿಸಿದೆ ಎಂದು ಈ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಜೂನ್ 8ರಂದು ನಡೆದ ಅಂತರ್ ಸಚಿವಾಲಯ ಸಮಿತಿ ಸಭೆಯಲ್ಲಿ ರಾಜ್ಯಗಳಿಗೆ ಆಹಾರಧಾನ್ಯ ಮಾರಾಟ ಮಾಡುವ ಕ್ರಮವನ್ನು ಕೈಬಿಡಲು ಶಿಫಾರಸ್ಸು ಮಾಡಲಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
ಮಾರುಕಟ್ಟೆ ಹಸ್ತಕ್ಷೇಪ ಮತ್ತು ಬೆಲೆ ನಿಯಂತ್ರಣಕ್ಕಾಗಿ ಸಾಕಷ್ಟು ಆಹಾರ ಧಾನ್ಯ ದಾಸ್ತಾನು ಇಟ್ಟುಕೊಳ್ಳುವ ಅಗತ್ಯ ಇರುವುದರಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ಹಾಗೂ ಗೋಧಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ 800 ದಶಲಕ್ಷ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭಧ್ರತಾ ಕಾಯ್ದೆಯಡಿ ಉಚಿತ ಆಹಾರಧಾನ್ಯಗಳನ್ನು ವಿತರಿಸುತ್ತಿದೆ. ಆದ್ದರಿಂದ ಹಣದುಬ್ಬರದಿಂದ ಗ್ರಾಹಕರನ್ನು ರಕ್ಷಿಸುವ ಕ್ರಮವಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಮುಕ್ತ ಮಾರುಕಟ್ಟೆ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.