ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ-ಬಜಕೂಡ್ಲು ಆಸುಪಾಸು ಎರಡು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮಹಿಳೆಯೊಬ್ಬರಿಂದ ಹಣ ಲಪಟಾಯಿಸಿದ ಅದೇ ರೀತಿ ಮಂಜೇಶ್ವರದಲ್ಲೂ ವ್ಯಾಪಾರಿಯನ್ನು ವಂಚಿಸಲಾಗಿದೆ.
ಮಂಜೇಶ್ವರ ತೂಮಿನಾಡಿನ ವ್ಯಾಪಾರಿ ಮೂಸಾ ಎಂಬವರನ್ನು ವಂಚಿಸಿ 2500ರೂ. ಎಗರಿಸಲಾಗಿದೆ. ಬೈಕಲ್ಲಿ ಆಗಮಿಸಿದ ಅಪರಿಚಿತನೊಬ್ಬ, ತಾನು ನಿಮ್ಮ ಪತ್ನಿಯ ದೂರದ ಸಂಬಂಧಿಯೆಂದು, ಪ್ರಧಾನಮಂತ್ರಿ ನಿಧಿಯಿಂದ ತಮಗೆ ಒಂದು ಲಕ್ಷ ರೂ. ಮಂಜೂರಾಗಿದ್ದು, ಇದನ್ನು ಪಡೆಯಲು ಎರಡುವರೆ ಸಾವಿರ ರೂ. ನಗದು, ಆಧಾರ್ ಕಾರ್ಡಿನ ಪ್ರತಿ, ಭಾವಚಿತ್ರ ನೀಡುವಂತೆ ತಿಳಿಸಿದ್ದಾನೆ. ವಂಚಕ ಆಸುಪಾಸಿನವರ ಕೆಲವರ ಹೆಸರನ್ನೂ ಹೇಳಿ ಪರಿಚಯಸ್ಥನಂತೆ ನಟಿಸಿದ್ದಾನೆ. ಹಣ ಕೈಗೆ ಸಿಗುತ್ತಿದ್ದಂತೆ ಬೈಕ್ ಏರಿ ಪರಾರಿಯಾಗಿದ್ದಾನೆ. ಅಲ್ಪ ಹೊತ್ತಿನ ನಂತರ ತಾನು ವಂಚನೆಗೊಳಗಾಗಿರುವುದು ಮೂಸಾ ಅವರ ಅರಿವಿಗೆ ಬಂದಿತ್ತು. ಈ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ನಡೆಸಿದ ತಪಾಸಣೆಯಲ್ಲಿ ಸನಿಹದ ಸಿಸಿ ಕ್ಯಾಮರಾದಲ್ಲಿ ಈ ವ್ಯಕ್ತಿಯ ಬೈಕಿನ ದೃಶ್ಯಾವಳಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.