ಭುವನೇಶ್ವರ: ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಸಂಭವಿಸಿದ ಮೂರು ರೈಲುಗಳ ಭೀಕರ ಅಪಘಾತದದಲ್ಲಿನ ನೂರಕ್ಕೂ ಹೆಚ್ಚು ಮೃತದೇಹಗಳ ಪತ್ತೆಗೆ ಒಡಿಶಾ ಸರ್ಕಾರ ಡಿಎನ್‌ಎ ಮಾದರಿ ಪರೀಕ್ಷೆ ಆರಂಭಿಸಿದೆ.
10 ಜನರ ಡಿಎನ್‌ಎ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಏಮ್ಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಈಗಾಗಲೇ ಗುರುತು ಪತ್ತೆಯಾಗದ 101 ಮೃತದೇಹಗಳನ್ನು ಆಸ್ಪತ್ರೆಯಿಂದ 5 ಕಂಟೇನರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಅವುಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಸೇರಿದಂತೆ ಕೆಲವು ರಾಜ್ಯಗಳ ಜನರು ಆಸ್ಪತ್ರೆಗೆ ಬಂದು ಡಿಎನ್‌ಎ ಮಾದರಿ ನೀಡುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
278 ಮೃತದೇಹಗಳ ಪೈಕಿ 177 ಶವಗಳನ್ನು ಗುರುತಿಸಲಾಗಿದೆ. ಇನ್ನೂ 101 ಶವಗಳ ಗುರುತು ಪತ್ತೆಯಾಗಿಲ್ಲ.
ವಿದ್ಯುದಾಘಾತದಿಂದ ಸಾವು:
'ಕೋರೊಮಂಡಲ್ ಎಕ್ಸ್‌ಪ್ರೆಸ್ ರೈಲಿನಿಂದ ವಶಪಡಿಸಿಕೊಂಡ ಸುಮಾರು 40 ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ಬಹುಶಃ ಇವರೆಲ್ಲರೂ ವಿದ್ಯುದಾಘಾತದಿಂದ ಸಾವಿಗೀಡಾಗಿರಬಹುದು' ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.
'ಅಪಘಾತ ಸಂಭವಿಸಿದಾಗ ರೈಲು ಹಾದಿಗುಂಟ ಇರುವ ವಿದ್ಯುತ್ ಪೂರೈಕೆ ತಂತಿಗಳು ತುಂಡಾಗಿ, ಕೆಲವು ಬೋಗಿಗಳಲ್ಲಿ ಸಿಲುಕಿಕೊಂಡಿದ್ದು, ಆ ಬೋಗಿಗಳಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರಿಗೆ ವಿದ್ಯುದಾಘಾತವನ್ನುಂಟು ಮಾಡಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ' ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪಿ. ಕುಮಾರ್ ನಾಯಕ್ ತಿಳಿಸಿದ್ದಾರೆ.
ಅಪಘಾತದ ಸ್ಥಳದಲ್ಲೇ ಹಾದುಹೋದ ಕೋರೊಮಂಡಲ್ ಎಕ್ಸ್‌ಪ್ರೆಸ್ ತ್ರಿವಳಿ ರೈಲು ಅಪಘಾತ ನಡೆದ ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿನ ರೈಲ್ವೆ ಮಾರ್ಗಗಳನ್ನು ದುರಸ್ತಿಗೊಳಿಸಲಾಗಿದ್ದು ಅದೇ ಮಾರ್ಗದಲ್ಲಿ ಮಂಗಳವಾರ ಚೆನ್ನೈ-ಕೋರೊಮಂಡಲ್ ಎಕ್ಸ್‌ಪ್ರೆಸ್ ರೈಲು 30 ಕಿ.ಮೀ ವೇಗದಲ್ಲಿ ಹಾದುಹೋಯಿತು. 'ವಂದೇ ಭಾರತ್ ಎಕ್ಸ್‌ಪ್ರೆಸ್' ಸೇರಿದಂತೆ 70ಕ್ಕೂ ಹೆಚ್ಚು ರೈಲುಗಳು ಬಹನಾಗಾ ಬಜಾರ್ ರೈಲು ನಿಲ್ದಾಣದ ಮೂಲಕ ಹಾದುಹೋಗಿವೆ. ಭಾನುವಾರ ರಾತ್ರಿ ಎರಡೂ ಮಾರ್ಗಗಳನ್ನು ಪುನರ್ ಸ್ಥಾಪಿಸಲಾಗಿದೆ.