ಕಣ್ಣೂರು: ಕಣ್ಣೂರು ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲು ಬೋಗಿಗೆ ಬೆಂಕಿ ತಗುಲಿದ ಘಟನೆಯ ಬಳಿಕ ಭಾರೀ ದುರಂತವೊಂದು ತಪ್ಪಿದ್ದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಬೆಂಕಿ ಹೊತ್ತಿಕೊಂಡ ರೈಲಿನ ಹಿಂದಿನ ಜನರಲ್ ಕೋಚ್ ಮತ್ತು ಬಿಪಿಸಿಎಲ್ ಇಂಧನ ಟ್ಯಾಂಕ್ ನಡುವೆ ಕೇವಲ 100 ಮೀಟರ್ ಅಂತರವಿತ್ತು. ಬೆಂಕಿಯನ್ನು ತ್ವರಿತವಾಗಿ ನಂದಿಸಿದ್ದರಿಂದ, ಘಟಿಸಬಹುದಾಗಿದ್ದ ದೊಡ್ಡ ಅಪಘಾತದಿಂದ ಪಾರಾಗಲಾಗಿದೆ.
ಎಲತ್ತೂರಿನಲ್ಲಿ ಶಾರುಖ್ ಸೈಫೀ ದಾಳಿ ಮಾಡಿದ ರೈಲಿನಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಹಿಂದಿನ ಜನರಲ್ ಕೋಚ್ ಸಂಪೂರ್ಣ ಸುಟ್ಟು ಕರಕಲಾಗಿದೆ. 3ನೇ ಪ್ಲಾಟ್ ಫಾರಂ ಬಳಿ 8ನೇ ಯಾರ್ಡ್ ನಲ್ಲಿ ರೈಲು ನಿಲುಗಡೆಯಾಗಿತ್ತು. ಬೋಗಿ ಬಳಿ ವ್ಯಕ್ತಿಯೊಬ್ಬ ಬೆತ್ತ ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಟ್ಟ ಕೋಚ್ ನ ವಾಶ್ ರೂಂ ಪಕ್ಕದ ಗಾಜು ಒಡೆದಿದೆ. ಇಂಧನ ಸೇರಿಸಿ ಬೆಂಕಿ ಹಚ್ಚಿರಬಹುದು ಎಂದು ತೀರ್ಮಾನಿಸಲಾಗಿದೆ.
ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎನ್‍ಐಎ ಕೇರಳ ಪೊಲೀಸರಿಂದ ಮಾಹಿತಿ ಕೇಳಿದೆ. ರಾಜ್ಯ ಪೊಲೀಸರು ಮತ್ತು ರೈಲ್ವೆ ಪೊಲೀಸರಿಂದ ಮಾಹಿತಿ ಕೇಳಲಾಗಿದೆ. ಬೆಂಕಿ ಹಚ್ಚಿದ ಪ್ರಕರಣದಲ್ಲಿ ವಿಧ್ವಂಸಕ ಕೃತ್ಯ ಎಸಗಿರುವ ಶಂಕೆಯ ಮೇರೆಗೆ ಎನ್‍ಐಎ ಮಾಹಿತಿ ಪಡೆಯುತ್ತಿದೆ.