ಸಬಾಂಗ್: ಕಳೆದ ಮೂರ್ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಪಶ್ಚಿಮ ಬಂಗಾಳದ ಸ್ಥಳೀಯ ಬಿಜೆಪಿ ನಾಯಕನ ಶವ ಗುರುವಾರ ಬೆಳಗ್ಗೆ ಪಶ್ಚಿಮ ಮೇದಿನಿಪುರ ಜಿಲ್ಲೆಯ ಬಲ್ಪೈ ಗ್ರಾಮದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ನಾಯಕನನ್ನು ಬಿಜೆಪಿ ಬೂತ್ ಅಧ್ಯಕ್ಷ ದೀಪಕ್ ಸಮಂತಾ ಎಂದು ಗುರುತಿಸಲಾಗಿದೆ.
"ದೀಪಕ್ ಸಮಂತಾ ಅವರು ಸಬಾಂಗ್‌ನಲ್ಲಿರುವ ಅವರ ಹಳ್ಳಿಯ ನಿವಾಸದಲ್ಲಿ ಸೀಲಿಂಗ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ರಾಜಕೀಯ ಪಕ್ಷಕ್ಕೆ ಸೇರಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಇದು ಆತ್ಮಹತ್ಯೆಯೋ ಅಥವಾ ಕೊಲೆ ಪ್ರಕರಣವೇ ಎಂಬುದರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’’ ಎಂದು ದೂರವಾಣಿ ಮೂಲಕ ಪೊಲೀಸರು ತಿಳಿಸಿದರು.
"ಸಮಂತಾ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 8ರ ಪಂಚಾಯತ್ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ ಸೇರುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಬಂಧ ಅವರ ಕುಟುಂಬ ಪೊಲೀಸರಿಗೆ ದೂರು ಸಹ ನೀಡಿದೆ" ಎಂದು ಬಿಜೆಪಿ ನಾಯಕ ತನ್ಮಯ್ ದಾಸ್ ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ದೀಪಕ್ ಸಮಂತಾ ಅವರಿಗೆ ಬಿಳಿ ಸೀರೆ ಮತ್ತು ಬಿಳಿ ಹೂವುಗಳನ್ನು ಕಳುಹಿಸಲಾಗಿತ್ತು. ಇದು ಜೀವ ಬೆದರಿಕೆಗೆ ಸಮಾನವಾಗಿದೆ ಎಂದು ದಾಸ್ ಆರೋಪಿಸಿದ್ದಾರೆ.