ತ್ರಿಸ್ಸೂರ್: ಕಿರುತೆರೆಯ ಸಹಾಯಕ ನಿರ್ದೇಶಕಿ ಮತ್ತು ಆಕೆಯ ಸ್ನೇಹಿತೆಯನ್ನು ಎಂಡಿಎಂಎ ಗಾಂಜಾದೊಂದಿಗೆ ಕೇರಳ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಲಿವಿಂಗ್ ಟುಗೆದರ್ನಲ್ಲಿದ್ದುಕೊಂಡು ಈ ನೀಚ ಕೃತ್ಯ ಎಸಗುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಬಂಧಿತರನ್ನು ಚೂಂಡಲ್ ಪುತ್ತುಸ್ಸೆರಿ ಮೂಲದ ಸಹಾಯಕ ನಿರ್ದೇಶಕಿ ಸುರಭಿ (23) ಮತ್ತು ಆಕೆಯ ಸ್ನೇಹಿತೆ ಕಣ್ಣೂರು ಕರುವಾಂಚ ಮೂಲದ ಪ್ರಿಯಾ (30) ಎಂದು ಗುರುತಿಸಲಾಗಿದೆ. ಇಬ್ಬರನ್ನು ಕೂನಮ್ಮೂಚಿ ಏರಿಯಾದಲ್ಲಿ ಬಂಧಿಸಲಾಗಿದ್ದು, ಅವರಿಂದ 17.5 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.
ಸಾಮಾಜಿಕ ಜಾಲತಾಣ ದುರ್ಬಳಕೆ
ಇವರಿಬ್ಬರು ಲಿವಿಂಗ್ ಟುಗೆದರ್ ರಿಲೇಶನ್ಶಿಫ್ನಲ್ಲಿದ್ದರು. ಇನ್ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಮಾದಕ ವ್ಯಸನಿಗಳನ್ನು ಪತ್ತೆಹಚ್ಚಿ ಮಾರಣಾಂತಿಕ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಮಾದಕ ವಸ್ತುಗಾಗಿ ಇಬ್ಬರು ವ್ಯಕ್ತಿಗಳು ಆರೋಪಿಗಳನ್ನು ಸಂಪರ್ಕಿಸಿದ್ದರು. ಬಳಿಕ ಎಂಡಿಎಂಎ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಬಂದಾಗ ಇಬ್ಬರನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 9000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸುರಭಿಯನ್ನು ಪ್ರಿಯಾ ಚಾಟಿಂಗ್ ಮೂಲಕ ಪರಿಚಯಿಸಿಕೊಂಡಳು. ಮೊದಲೇ ಮದುವೆಯಾಗಿದ್ದ ಪ್ರಿಯಾ, ಗಂಡನನ್ನು ತೊರೆದು ಸುರಭಿಯೊಂದಿಗೆ ವಾಸಿಸಲು ನಿರ್ಧರಿಸಿದಳು. ಬಳಿಕ ಇಬ್ಬರು ಸೇರಿ ಮಾದಕವಸ್ತು ಜಾಲಕ್ಕೆ ಸಿಲುಕಿದರು. ಪಾರ್ಟಿಯ ವೇಳೆ ಆಕಸ್ಮಿಕವಾಗಿ ಮಾದಕ ವಸ್ತುವನ್ನು ಸೇವಿಸಿದ್ದೆ, ಆನಂತರ ಅದನ್ನು ಬಿಡಲು ಸಾಧ್ಯವಾಗಲಿಲ್ಲ ಎಂದು ಸುರಭಿ ಪೊಲೀಸರಿಗೆ ತಿಳಿಸಿದ್ದಾಳೆ. ಎಂಡಿಎಂಎ ಪಡೆಯುವುದಕ್ಕಾಗಿ ಹಣ ಸಂಪಾದಿಸಲು ಮಾದಕ ವಸ್ತು ಮಾರುವ ದುಷ್ಕೃತ್ಯಕ್ಕೆ ಇಳಿದಳು ಎಂದು ತಿಳಿದುಬಂದಿದೆ.
ಅಂತಾರಾಜ್ಯ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದ ಇಬ್ಬರು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ ಬಳಿಕ ಪೊಲೀಸರು ಬೀಸಿದ ಬಲೆಗೆ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದೊಡ್ಡ ಮಾಫಿಯಾದೊಂದಿಗೆ ಇಬ್ಬರು ನೇರ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.