ಲಖನೌ: ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ವೇಳೆ ಖ್ಯಾತ ಕುಸ್ತಿಪಟುಗಳ ಜೊತೆ ಪೊಲೀಸರು ನಡೆದುಕೊಂಡ ರೀತಿಯನ್ನು ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ನಡೆದ ರೈತರ ಮಹಾಪಂಚಾಯತ್ ಟೀಕಿಸಿದೆ.
ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿರುವ ಸಭೆ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿದೆ.
'ನಮ್ಮ ಹೆಣ್ಣುಮಕ್ಕಳ(ಮಹಿಳಾ ಕುಸ್ತಿಪಟುಗಳು) ಜೊತೆ ನಾವು ದೃಢವಾಗಿ ನಿಂತಿದ್ದೇವೆ. ಅವರು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಲು ಬೇಕಾದ ಎಲ್ಲವನ್ನೂ ನಾವು ಮಾಡುತ್ತೇವೆ'ಎಂದು ಭಾರತೀಯ ಕಿಸಾನ್ ಯೂನಿಯನ್‌ನ(ಬಿಕೆಯು) ಮುಖಂಡ ಮಂಗೇರಾಮ್ ತ್ಯಾಗಿ ಹೇಳಿದ್ದಾರೆ.
ಜಾತಿ ಆಧಾರದ ಮೇಲೆ ಕುಸ್ತಿಪಟುಗಳನ್ನು ಬೇರ್ಪಡಿಸುವ ಯತ್ನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅವರು(ಕುಸ್ತಿಪಟುಗಳು) ದೇಶಕ್ಕಾಗಿ ಪದಕ ಗೆದ್ದಾಗ ಯಾವ ಕುಲ ಯಾವುದು ಎಂದು ಯಾರಾದರೂ ಕೇಳಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ರೈತ ಮುಖಂಡರ ಮತ್ತೊಂದು ಸಭೆ ಶುಕ್ರವಾರ ಹರಿಯಾಣದಲ್ಲಿ ನಡೆಯಲಿದ್ದು, ಕುಸ್ತಿಪಟುಗಳ ಪರ ಹೋರಾಟದ ಕುರಿತಾದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕುಸ್ತಿಪಟುಗಳಿಗೆ ಬೆಂಬಲವಾಗಿ ಬಿಕೆಯುನ ನೂರಾರು ಕಾರ್ಯಕರ್ತರು ಮೀರತ್ ಪಟ್ಟಣದಲ್ಲಿಯೂ ಪ್ರತಿಭಟನೆ ನಡೆಸಿದರು. ಸಿಂಗ್ ಬಂಧನಕ್ಕೆ ಒತ್ತಾಯಿಸಿದರು.
'ಮಹಿಳಾ ಕುಸ್ತಿಪಟುಗಳ ಮಾತನ್ನು ಕೇಳಲು ಸರ್ಕಾರ ಸಿದ್ಧವಿಲ್ಲ. ಡಬ್ಲ್ಯುಎಫ್‌ಐ ಅಧ್ಯಕ್ಷನನ್ನು ಬಂಧಿಸಲೇಬೇಕು ಎಂದು ಮೀರತ್ ಜಿಲ್ಲೆಯ ಬಿಕೆಯು ಘಟಕದ ಅಧ್ಯಕ್ಷ ಅನುರಾಗ್ ಚೌಧರಿ ಹೇಳಿದರು.