ನವದೆಹಲಿ: 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಗೋರಖಪುರದ ಪ್ರಕಾಶನ ಸಂಸ್ಥೆ 'ಗೀತಾ ಪ್ರೆಸ್' ಭಾಜನವಾಗಿದೆ. ಗಾಂಧಿ ಮಾರ್ಗದ ಮೂಲಕ ಸಾಮಾಜಿಕ, ಅರ್ಥಿಕ ಮತ್ತು ರಾಜಕೀಯ ಪರಿವರ್ತನೆ ತರುವಲ್ಲಿ ಸಂಸ್ಥೆಯ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಪ್ರಶಸ್ತಿ ಆಯ್ಕೆ ಮಂಡಳಿಯು ಗೀತಾ ಪ್ರೆಸ್ ಅನ್ನು ಪ್ರಶಸ್ತಿಗೆ ಅವಿರೋಧವಾಗಿ ಆಯ್ಕೆ ಮಾಡಿತು. ಗಾಂಧಿ ಅವರ ಆದರ್ಶಗಳಾದ ಶಾಂತಿ, ಸೌಹಾರ್ದವನ್ನು ಪ್ರಚುರಪಡಿಸುವಲ್ಲಿ ಗೀತಾ ಪ್ರೆಸ್ ವಹಿಸಿರುವ ಪಾತ್ರವನ್ನು ಮೋದಿ ಅವರು ಈ ವೇಳೆ ನೆನೆದರು. ಸಂಸ್ಥೆಯು 100 ವರ್ಷಗಳನ್ನು ಪೂರೈಸಿದ ವರ್ಷವೇ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗುತ್ತಿರುವುದು, ಸಾಮುದಾಯಿಕ ಸೇವೆಯಲ್ಲಿ ಅದು ಕೈಗೊಂಡಿದ್ದ ಕೆಲಸಗಳಿಗೆ ಸಿಕ್ಕ ಮನ್ನಣೆ ಎಂದು ಮೋದಿ ಹೇಳಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1923ರಲ್ಲಿ ಗೀತಾ ಪ್ರೆಸ್ ಸ್ಥಾಪಿಸಲಾಯಿತು. ಈ ವರೆಗೂ ಸಂಸ್ಥೆಯು 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ.
ಮಹಾತ್ಮ ಗಾಂಧಿ ಅವರ 125ನೇ ಜಯಂತಿ ಸ್ಮರಣಾರ್ಥವಾಗಿ 1995ರಲ್ಲಿ ಅಂದಿನ ಸರ್ಕಾರವು ಗಾಂಧಿ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಈ ಪ್ರಶಸ್ತಿಯು ₹1 ಕೋಟಿ ಬಹುಮಾನ ಮೊತ್ತ, ಸ್ಮರಣಿಕೆ, ಫಲಕ ಮತ್ತು ಸಾಂಪ್ರದಾಯಿಕ ಕರಕುಶಲ ಅಥವಾ ಕೈಮಗ್ಗದ ವಸ್ತುಗಳನ್ನು ಹೊಂದಿರುತ್ತದೆ.