ತೂಕ ಕಡಿಮೆ ಇರೋರಿಗೆ ತೂಕ ಹೆಚ್ಚಿಸಿಕೊಳ್ಳುವ ಹುಚ್ಚು. ತೂಕ ಹೆಚ್ಚಿರೋರಿಗೆ ತೂಕ ಕಳೆದುಕೊಳ್ಳುವ ಹುಚ್ಚು. ಇತ್ತೀಚಿಗೆ ಫಿಟ್ ಆಗಿರೋದು ಒಂದು ರೀತಿ ಟ್ರೆಂಡ್ ಆಗ್ಬಿಟ್ಟಿದೆ. ಹೀಗಾಗಿ ಪ್ರತಿಯೊಬ್ಬರು ತೂಕ ಕಳೆದು ಕೊಳ್ಳೋದಕ್ಕೆ ಒಂದಲ್ಲ ಒಂದು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವರು ವ್ಯಾಯಾಮ, ಯೋಗ, ಜುಂಬಾ ಡಾನ್ಸ್ ಹೀಗೆ ತೂಕ ಕಳೆದುಕೊಳ್ಳೋದಕ್ಕೆ ಹಲವಾರು ವಿಧಾನಗಳನ್ನು ಪ್ರಯತ್ನಿಸುತ್ತಾರೆ.
ಇವುಗಳ ಜೊತೆಗೆ ನಾವು ಆಹಾರದಲ್ಲೂ ಕೂಡ ನಿಯಂತ್ರಣ ಇಟ್ಟುಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವೊಂದು ಸಲ ನಾವು ಎಷ್ಟೇ ವ್ಯಾಯಾಮಗಳನ್ನು ಮಾಡಿದ್ರು ಕೂಡ ತೂಕ ಕಡಿಮೆ ಆಗೋದೇ ಇಲ್ಲ. ಇದಕ್ಕೆ ನಮ್ಮ ತಪ್ಪಾದ ಆಹಾರ ಪದ್ಧತಿಯೇ ಕಾರಣ. ಅಷ್ಟಕ್ಕು ಯಾವ ಆಹಾರದ ಜೊತೆಗೆ ಯಾವ ಆಹಾರವನ್ನು ತಿನ್ನಬಾರದು ಅನ್ನೋದನ್ನು ತಿಳಿಯೋಣ.
1. ಹಾಲು ಮತ್ತು ಬಾಳೆಹಣ್ಣು
ರಾತ್ರಿ ಊಟ ಆದ ಮೇಲೆ ಹೆಚ್ಚಿನವರಿಗೆ ಹಾಲು ಹಾಗೂ ಬಾಳೆಹಣ್ಣು ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದ್ರಲ್ಲೂ ಯಾರು ತೂಕ ಇಳಿಸ್ಬೇಕು ಅಂದುಕೊಂಡಿದ್ದೀರೋ ಅವರಂತೂ ಇದನ್ನು ಒಟ್ಟಾಗಿ ಸೇವನೆ ಮಾಡಲೇಬಾರದು. ಹಾಲು ಹಾಗೂ ಬಾಳೆಹಣ್ಣು ಇವೆರಡೂ ಅಧಿಕ ಪೋಷಕಾಂಶವನ್ನು ಹೊಂದಿದೆ. ಹೀಗಾಗಿ ಇದನ್ನು ಒಟ್ಟಿಗೆ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ಒಂದು ವೇಳೆ ಇದನ್ನು ತಿನ್ನಲೇಬೇಕೆಂದಿದ್ದರೆ ಒಂದು ಆಹಾರ ತಿಂದ ಮೇಲೆ ಮತ್ತೊಂದು ಆಹಾರ ತಿನ್ನಲು 20-30 ನಿಮಿಷಗಳ ಅಂತರವಿರಲಿ.
2. ಚಪಾತಿ ಮತ್ತು ಅನ್ನ
ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ರಾತ್ರಿ ಊಟಕ್ಕೆ ಚಪಾತಿ ಹಾಗೂ ಅನ್ನ ಇದ್ದೇ ಇರುತ್ತದೆ. ಚಪಾತಿ ತಿಂದ ಮೇಲೆ ಊಟ ಮಾಡೋದು ಎಲ್ಲರಿಗೂ ರೂಡಿಯಾಗಿದೆ. ಒಂದು ಅಧ್ಯಯನದ ಪ್ರಕಾರ ಚಪಾತಿ ಹಾಗೂ ಅನ್ನವನ್ನು ಒಟ್ಟಾಗಿ ಸೇವಿಸಬಾರದಂತೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ನಿಮ್ಮ ಪಿಷ್ಟದ ಸೇವನೆಯು ಹೆಚ್ಚಾಗುತ್ತದೆ. ಇದು ಅಜೀರ್ಣ, ಉಬ್ಬುವಿಕೆಗೆ ಕಾರಣವಾಗಬಹುದು ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಾಗುವಂತೆ ಮಾಡುತ್ತದೆ.
3. ಅಧಿಕ ಪ್ರೋಟೀನ್ ಇರುವ ಆಹಾರವನ್ನು ಒಂದೇ ಬಾರಿ ಸೇವಿಸೋದು
ಸಾಕಷ್ಟು ಪ್ರೋಟೀನ್ ಇರುವ ಹೆಚ್ಚಿನ ಆಹಾರವನ್ನು ಒಂದೇ ಬಾರಿಗೆ ಸೇವನೆ ಮಾಡೋದ್ರಿಂದ ತೂಕ ಕಳೆದುಕೊಳ್ಳಬಹುದು ಎಂದು ಹೆಚ್ಚಿನವರ ಕಲ್ಪನೆ. ಆದರೆ ಇದು ತಪ್ಪು. ಸಿಕ್ಕಾಪಟ್ಟೆ ಪ್ರೋಟೀನ್ ಇರೋ ಆಹಾರವನ್ನು ಸೇವನೆ ಮಾಡಿದ್ರೆ ನಮ್ಮ ದೇಹಕ್ಕೆ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಹೀಗಾಗಿ ನಮ್ಮ ಆಹಾರದಲ್ಲಿ ನಮ್ಮ ದೇಹವು ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟು ಪ್ರೋಟೀನ್ ಅನ್ನು ಮಾತ್ರ ಹೊಂದಿರಬೇಕು. ಪ್ರೋಟೀನ್ ಅಗತ್ಯಕ್ಕಿಂತ ಹೆಚ್ಚಾದರೆ ತೂಕ ಹೆಚ್ಚಾಗುವ ಸಾಧ್ಯತೆಯಿದೆ.
4. ಟೀ ಜೊತೆಗೆ ಕುರುಕಲು ತಿಂಡಿ ಸೇವಿಸೋದು
ಟೀ ಅನೇಕ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಟೀ ಕುಡಿಯೋದು ಒಂದು ರೀತಿಯ ಚಟ. ಇನ್ನೂ ಕೆಲವರಿಗಂತೂ ಟೀ ಇಲ್ಲದೇ ಅವರ ದಿನಾನೇ ಸಾಗೋದಿಲ್ಲ. ಹೆಚ್ಚಿನ ಮನೆಗಳಲ್ಲಿ ಟೀ ಜೊತೆ ತಿನ್ನೋದಕ್ಕೆ ಏನಾದ್ರೂ ಕುರುಕಲು ತಿಂಡಿ ಬೇಕೇ ಬೇಕು. ಸಂಜೆ ಆದ್ರೆ ಸಾಕು ಒಂದು ಕೈಯಲ್ಲಿ ಟೀ ಮತ್ತೊಂದು ಕೈಯಲ್ಲಿ ಸ್ನಾಕ್ಸ್ ಹಿಡಿದು ಕುಳಿತಿರುತ್ತಾರೆ.
ಆದ್ರೆ ಆರೋಗ್ಯದ ದೃಷ್ಟಿಯಿಂದ ಈ ಎರಡನ್ನು ಒಟ್ಟಾಗಿ ಸೇವನೆ ಮಾಡೋದು ಒಳ್ಳೆಯದಲ್ಲ. ವೈಜ್ಞಾನಿಕವಾಗಿ ನೋಡೋದಕ್ಕೆ ಹೋದ್ರೆ ಇದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚಹಾವು ಟ್ಯಾನಿನ್ ಅಂಶವನ್ನು ಹೊಂದಿರುತ್ತದೆ. ಇದು ಆಹಾರದೊಂದಿಗೆ ಸಂಯೋಜಿಸಿದಾಗ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಆಮ್ಲೀಯತೆ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು.
5. ಊಟ ಮತ್ತು ಡೆಸಾರ್ಟ್
ಡೆಸಾರ್ಟ್ ಅಂದ್ರೆ ಈ ಕೇಕ್, ಐಸ್ ಕ್ರೀಮ್, ಡೋನಟ್ ಮುಂತಾದುವುಗಳು. ಆರೋಗ್ಯದ ದೃಷ್ಟಿಯಿಂದ ಗಮನಿಸಿದ್ರೆ ಇವುಗಳ ಅತಿಯಾದ ಸೇವನೆ ಖಂಡಿತ ಒಳ್ಳೆಯದಲ್ಲ. ಅದ್ರಲ್ಲೂ ಹೆಚ್ಚಿನವರು ಊಟ ಆದ ತಕ್ಷಣ ಸ್ವಲ್ಪವೂ ಗ್ಯಾಪ್ ನೀಡದೇ ಡೆಸಾರ್ಟ್ ತಿನ್ನುತ್ತಾರೆ.
ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಜೊತೆಗೆ ಈ ಡೆಸಾರ್ಟ್ ಗಳಲ್ಲಿ ಕ್ಯಾಲೊರಿ ಅಂಶ ಹೆಚ್ಚಾಗಿ ಇರೋದ್ರಿಂದ ತೂಕ ಹೆಚ್ಚಾಗೋದಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಊಟದ ನಂತರ ಡೆಸಾರ್ಟ್ ತಿನ್ನಲೇ ಬೇಕು ಅನ್ನಿಸಿದ್ರೆ ಊಟ ಆಗಿ 20-30 ನಿಮಿಷ ಬಿಟ್ಟು ಸ್ವಲ್ಪನೇ ಸ್ವಲ್ಪ ಡೆಸಾರ್ಟ್ ತಿನ್ನಿ.
ತೂಕ ಇಳಿಸೋದಕ್ಕೆ ಏನು ತಿನ್ನಬೇಕು?
ತೂಕ ಇಳಿಸಬೇಕು ಎನ್ನುವವರು ಯಾವಾಗಲೂ ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಇನ್ನೂ ನೀವು ಸೇವಿಸುವ ಆಹಾರದಿಂದ ಕಾರ್ಬೋಹೈಡ್ರೇಟ್ ಅನ್ನು ತ್ಯಜಿಸಬೇಡಿ. ಯಾಕಂದ್ರೆ ಅವುಗಳು ನಿಮಗೆ ಶಕ್ತಿ ನೀಡುವ ಆಹಾರಗಳಾಗಿದೆ. ಆದರೆ ಕಾರ್ಬೋಹೈಡ್ರೇಟ್ ಸೇವನೆಯನ್ನು ಮಿತಗೊಳಿಸಬೇಕು.
ತೂಕ ಇಳಿಸುವ ನಿರ್ಧರಿಸುವ ಮೊದಲು ಮಾರ್ಗದರ್ಶಕರ ಸಹಾಯ ಪಡೆಯಿರಿ. ಅವರು ನಿಮಗೆ ಯಾವ ರೀತಿ ವ್ಯಾಯಾಮ ಮಾಡಬೇಕು? ಎಂತಹ ಆಹಾರ ಸೇವನೆ ಮಾಡಬೇಕು ಅನ್ನೋದ್ರ ಬಗ್ಗೆ ಮಾಹಿತಿ ನೀಡುತ್ತಾರೆ.