ನವದೆಹಲಿ: ದೆಹಲಿಯ ರೈಲು ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವಿಗೀಡಾಗಿರುವ ದುರಂತ ಘಟನೆ ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ವೇಳೆ ಅವಘಡ ಸಂಭವಿಸಿದೆ.
ನವದೆಹಲಿ ರೈಲ್ವೆ ನಿಲ್ದಾಣದ ಗೇಟ್ ನಂಬರ್ 1ರಲ್ಲಿ ದುರಂತ ಸಂಭವಿಸಿದ್ದು, 34 ವರ್ಷದ ಸಾಕ್ಷಿ ಅಹುಜಾ ಎಂಬವರು ಮೃತಪಟ್ಟಿದ್ದಾರೆ. ಈ ವೇಳೆ ಸಹೋದರಿ ಮಾದ್ವಿ ಚೋಪ್ರಾ ಜೊತೆಗಿದ್ದರು ಎನ್ನಲಾಗಿದೆ.
ಭಾರಿ ಮಳೆ ಸುರಿಯುತ್ತಿದ್ದ ವೇಳೆ ನಿಲ್ದಾಣದತ್ತ ಹೋಗುತ್ತಿದ್ದ ಮಹಿಳೆ ಆಯತಪ್ಪಿ ಬೀಳುವುದನ್ನು ತಡೆಯಲು ವಿದ್ಯುತ್ ಕಂಬವನ್ನು ಆಧಾರವಾಗಿ ಹಿಡಿದುಕೊಂಡಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆ ವರದಿಯಲ್ಲಿ ತಿಳಿದು ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸಾಕ್ಷಿ ಸಹೋದರಿ ಮಾದ್ವಿ ಚೋಪ್ರಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರ ಆಧಾರದಲ್ಲಿ ಐಪಿಸಿ ಸೆಕ್ಷನ್ 287 (ಆಡಳಿತ ವರ್ಗದ ನಿರ್ಲಕ್ಷ್ಯ ವರ್ತನೆ) ಮತ್ತು ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.