ಭುವನೇಶ್ವರ್: ಸುಮಾರು 300 ಜೀವಗಳನ್ನು ಬಲಿತೆಗೆದುಕೊಂಡ ಭೀಕರ ರೈಲು ಅಪಘಾತ ಸಂಭವಿಸಿ ಸುಮಾರು ನಾಲ್ಕು ವಾರವಾದರ ಮೃತರ ಸಂಬಂಧಿಕರ ದುಃಖ ಮತ್ತು ವೇದನೆ ಇನ್ನೂ ಕಡಿಮೆಯಾಗಿಲ್ಲ.
ಜೂನ್ 2 ರಂದು ನಡೆದ ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಮೃತ ದೇಹ ಪಡೆಯಲು ಸಂತ್ರಸ್ತರ ಬಂಧುಗಳು ಇನ್ನೂ ಕಾಯುತ್ತಿದ್ದಾರೆ. ಬಿಹಾರದ ಬೇಗುಸರಾಯ್ ಜಿಲ್ಲೆಯ ಬರಿ-ಬಲ್ಲಿಯಾ ಗ್ರಾಮದ ಬಸಂತಿ ದೇವಿ ತನ್ನ ಪತಿಯ ಮೃತದೇಹವನ್ನು ಪಡೆಯಲು ಕಳೆದ 10 ದಿನಗಳಿಂದ ಏಮ್ಸ್ ಬಳಿಯ ಅತಿಥಿ ಗೃಹದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗುತ್ತಿಗೆ ಕಾರ್ಮಿಕನಾಗಿದ್ದ ನನ್ನ ಪತಿ ಯೋಗೇಂದ್ರ ಪಾಸ್ವಾನ್‌ಗಾಗಿ ಇಲ್ಲಿದ್ದೇನೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಬಹನಾಗಾ ಬಜಾರ್‌ನಲ್ಲಿ ಅಪಘಾತದಲ್ಲಿ ಅವರು ಸಾವನ್ನಪ್ಪಿದರು ಎಂದು ಪತಿಯ ಶವಕ್ಕಾಗಿ ಕಾಯುತ್ತಿರುವ ಮಹಿಳೆ ನೋವು ವ್ಯಕ್ತ ಪಡಿಸಿದ್ದಾರೆ. ಶವ ಯಾವಾಗ ದೊರೆಯಲಿದೆ ಎಂಬ ಬಗ್ಗೆ ಅಧಿಕಾರಿಗಳು ನಿಖರ ಮಾಹಿತಿ ನೀಡುತ್ತಿಲ್ಲ ಎಂದಿದ್ದಾರೆ. ಕೆಲವು ಅಧಿಕಾರಿಗಳು ಇನ್ನೂ 5 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರೆ, ಮತ್ತೆ ಕೆಲವರು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ಸ್ಥಳೀಯ ಆಡಳಿತದಿಂದ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು.
ನನಗೆ ಐದು ಮಕ್ಕಳಿದ್ದಾರೆ. ನಾನು ಮೂರು ಮಕ್ಕಳನ್ನು ಬಿಟ್ಟು ಇಬ್ಬರು ಗಂಡು ಮಕ್ಕಳನ್ನು ನನ್ನೊಂದಿಗೆ ಕರೆತಂದಿದ್ದೇನೆ. ನನ್ನ ಪತಿ ಒಬ್ಬರೆ ಮನೆಯ ಏಕೈಕ ಜೀವನಾಧಾರವಾಗಿತ್ತು. ನಾನು ಹೇಗೆ ಬದುಕಬೇಕು ಎಂದು ನನಗೆ ತಿಳಿದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ತನ್ನ ಮೊಮ್ಮಗ ಸೂರಜ್ ಕುಮಾರ್ ಮೃತದೇಹವನ್ನು ಪಡೆಯಲು ಪೂರ್ಣಿಯ ನಾರಾಯಣ ರಿಷಿದೇವ್ ಜೂನ್ 4 ರಿಂದ ಕಾಯುತ್ತಿದ್ದಾರೆ, ಅವರ ಪರಿಸ್ಥಿತಿಯೂ ಇದೇ ಆಗಿದೆ. ಸೂರಜ್ ಅವರು ದುರದೃಷ್ಟಕರ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದರು. ಮೆಟ್ರಿಕ್ಯುಲೇಷನ್ ಮುಗಿಸಿದ ಸೂರಜ್ ಕೆಲಸ ಹುಡುಕಿಕೊಂಡು ಚೆನ್ನೈಗೆ ಹೊರಟಿದ್ದ. ಅಧಿಕಾರಿಗಳು ಈಗಾಗಲೇ ನನ್ನ ಡಿಎನ್‌ಎ ಮಾದರಿಯನ್ನು ತೆಗೆದುಕೊಂಡಿದ್ದಾರೆ, ಆದರೆ ವರದಿ ಇನ್ನೂ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ ಅಂತ್ಯದಲ್ಲಿ ತನ್ನ ಮಗ ವಿಪುಲ್ ಮದುವೆ ಇತ್ತು, ಹೀಗಾಗಿ ತಿರುಪತಿಯಿಂದ ಮನೆಗೆ ಹಿಂದಿರುಗುತ್ತಿದ್ದ ಎದು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಶಿವಕಾಂತ್ ರಾಯ್ ತಿಳಿಸಿದ್ದಾರೆ. "ನನ್ನ ಮಗನ ಶವವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು ಆದರೆ ನಾನು ಅವನನ್ನು ಬಾಲಸೋರ್ ಆಸ್ಪತ್ರೆಯಲ್ಲಿ ಹುಡುಕುತ್ತಿದ್ದೆ. ನಂತರ ನನಗೆ ತಿಳಿಸಲಾಯಿತು ಕಿಮ್ಸ್ ಆಸ್ಪತ್ರೆಯು ಬಿಹಾರದ ಬೇರೋಬ್ಬರಿಗೆ ನನ್ನ ಮಗನ ಶವ ಹಸ್ತಾಂತರಿಸಿತು, ಅವರು ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಶಿವಕಾಂತ್ ರಾಯ್ ತಿಳಿಸಿದ್ದಾರೆ.
ಅದೇ ರೀತಿ ಬಿಹಾರದ ಮುಜಾಫರ್‌ಪುರದ ರಾಜಕಾಲಿ ದೇವಿ ಚೆನ್ನೈಗೆ ತೆರಳುತ್ತಿದ್ದ ಪತಿಯ ಶವಕ್ಕಾಗಿ ಕಾದು ಕುಳಿತಿದ್ದಾರೆ. 35 ಮಂದಿ ಅತಿಥಿ ಗೃಹದಲ್ಲಿ ಮೊಕ್ಕಾಂ ಹೂಡಿದ್ದು, ಡಿಎನ್‌ಎ ವರದಿ ಬರುವುದು ತಡವಾದ ಕಾರಣ 15 ಮಂದಿ ಮನೆಗೆ ತೆರಳಿದ್ದಾರೆ.
ತಮ್ಮ ಡಿಎನ್‌ಎ ಮಾದರಿಗಳನ್ನು ನೀಡುವಂತೆ ಹಕ್ಕುದಾರರಿಗೆ ಮನವಿ ಮಾಡುತ್ತಿದ್ದೇವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ನಾವು ಏಮ್ಸ್ ಮತ್ತು ರಾಜ್ಯ ಸರ್ಕಾರದ ನಡುವೆ ಸೇತುವೆಯಾಗಿದ್ದೇವೆ ಎಂದು ರೈಲ್ವೆ ಅಧಿಕಾರಿ ಹೇಳಿದರು.