ಲಖನೌ(PTI): 'ಸಹಜೀವನ ಸಂಬಂಧವು (ಲಿವ್ ಇನ್ ರಿಲೇಷನ್‌ಶಿಪ್) ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ನ್ಯಾಯಾಲಯಗಳ ಮಧ್ಯಸ್ಥಿಕೆಯಿಂದ ಬಗೆಹರಿಸಲಾಗದು. ಈ ಸಮಸ್ಯೆಯನ್ನು ಸಾಮಾಜಿಕವಾಗಿಯೇ ಬೇರುಸಮೇತ ಕಿತ್ತುಹಾಕಬೇಕು' ಎಂದು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ತನ್ನ ಮಹತ್ವದ ತೀರ್ಪಿನಲ್ಲಿ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸಂಗೀತಾ ಚಂದ್ರ ಮತ್ತು ನರೇಂದ್ರ ಕುಮಾರ್ ಜೊಹಾರಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಸಹಜೀವನ ನಡೆಸುತ್ತಿದ್ದ ಅಂತರ ಧರ್ಮೀಯ ಜೋಡಿಯೊಂದು (ಹಿಂದೂ ಮಹಿಳೆ- ಮುಸ್ಲಿಂ ಪುರುಷ) ಪೊಲೀಸ್ ಕಿರುಕುಳದಿಂದ ರಕ್ಷಣೆ ಕೋರಿದ ಪ್ರಕರಣದಲ್ಲಿ ಈ ತೀರ್ಪು ನೀಡಿದೆ. ಮಧ್ಯಸ್ಥಿಕೆ ವಹಿಸಿ ಜೋಡಿಗೆ ರಕ್ಷಣೆ ನೀಡುವಂತೆ ಆದೇಶ ನೀಡಲೂ ಪೀಠ ನಿರಾಕರಿಸಿದೆ.
'ಸಹಜೀವನ ಸಂಬಂಧವು ಸಾಮಾಜಿಕವಾಗಿ ಬೇರುಸಹಿತ ಕಿತ್ತುಹಾಕಬಹುದಾದ ಸಮಸ್ಯೆ ಎಂದು ನಾವು ನಂಬುತ್ತೇವೆಯೇ ಹೊರತು ನ್ಯಾಯಾಲಯದ ಮಧ್ಯಪ್ರವೇಶದಿಂದ ಬಗೆಹರಿಸಬಹುದಾದ ಸಮಸ್ಯೆ ಎಂದಲ್ಲ. ಒಂದು ವೇಳೆ ಅರ್ಜಿದಾರರು ತಮ್ಮ ಸಹಜೀವನದ ಕಾರಣಕ್ಕಾಗಿಯೇ ತಮ್ಮ ಸಂಬಂಧಿಕರು, ಪೋಷಕರಿಂದ ಜೀವ ಬೆದರಿಕೆ ಎದುರಿಸುತ್ತಿದ್ದರೆ ಅವರು ಎಫ್‌ಐಆರ್ ದಾಖಲಿಸಲು ಸ್ವತಂತ್ರರು' ಎಂದು ನ್ಯಾಯಪೀಠವು ಹೇಳಿದೆ.
'ಸಹಜೀವನ ಸಂಬಂಧಕ್ಕೆ ಇಸ್ಲಾಂ ಧರ್ಮದಲ್ಲಿ ಮನ್ನಣೆ ಇಲ್ಲ ಎಂದು ಹೇಳಿದ ನ್ಯಾಯಾಲಯವು, 'ಮುಸ್ಲಿಂ ಕಾನೂನಿನಲ್ಲಿ ಮದುವೆಗೆ ಹೊರತಾದ ಲೈಂಗಿಕತೆಗೆ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ' ಎಂದೂ ಹೇಳಿದೆ.
ಇಸ್ಲಾಂ ಧರ್ಮದ 'ಝಿನಾ' (ಗಂಡ-ಹೆಂಡತಿಯ ಲೈಂಗಿಕ ಸಂಬಂಧ ಹೊರತುಪಡಿಸಿ ವಿವಾಹಬಾಹಿರ ಹಾಗೂ ವಿವಾಹಕ್ಕೂ ಮುಂಚಿನ ಲೈಂಗಿಕ ಸಂಬಂಧ) ಕುರಿತು ಉಲ್ಲೇಖಿಸಿದ ನ್ಯಾಯಾಲಯವು, 'ಇಸ್ಲಾಂನಲ್ಲಿ ಮದುವೆಗೆ ಮುಂಚಿನ ಲೈಂಗಿಕತೆ, ಪ್ರೀತಿಯ ಕ್ರಿಯೆಗಳಾದ ಚುಂಬನ, ಸ್ಪರ್ಶ, ದಿಟ್ಟಿಸಿ ನೋಡುವುದು ಇತ್ಯಾದಿ 'ಹರಾಮ್' (ನಿಷಿದ್ಧ) ಆಗಿರುತ್ತವೆ. ಏಕೆಂದರೆ, ಇಂತಹ ಕ್ರಿಯೆಗಳನ್ನು 'ಝಿನಾ'ದ ಭಾಗಗಳನ್ನಾಗಿ ಪರಿಗಣಿಸಲಾಗಿದೆ. ಕುರಾನ್‌ನ (ಅಧ್ಯಾಯ 24) ಪ್ರಕಾರ, ಅಂತಹ ಅಪರಾಧ ಮಾಡುವ ಅವಿವಾಹಿತ ಗಂಡು ಮತ್ತು ಹೆಣ್ಣಿಗೆ ನೂರು ಹೊಡೆತಗಳ ಶಿಕ್ಷೆಯನ್ನು ಮತ್ತು ವಿವಾಹಿತ ಗಂಡು ಮತ್ತ ಹೆಣ್ಣಿಗೆ ಕಲ್ಲು ಎಸೆದು ಸಾಯಿಸುವ ಶಿಕ್ಷೆಯನ್ನು ವಿಧಿಸಲಾಗಿದೆ' ಎಂದೂ ಹೇಳಿದೆ.
'ಸಹಜೀವನ ಸಂಬಂಧಗಳು ಸೃಷ್ಟಿಸಬಹುದಾದ ಭಾವನಾತ್ಮಕ ಮತ್ತು ಸಾಮಾಜಿಕ ಒತ್ತಡಗಳು, ಆಸ್ತಿಹಂಚಿಕೆ ಸೇರಿದಂತೆ ಇತರ ವಿಷಯಗಳು ಕಾನೂನು ತೊಡಕನ್ನು ಉಂಟುಮಾಡಬಹುದು. ಈ ದೃಷ್ಟಿಯಿಂದ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಷ್ಟೇ ಅಲ್ಲ, ಸಹಜೀವನ ಸಂಬಂಧದಲ್ಲಿ ಸಂಗಾತಿಯಿಂದ ವಂಚನೆ, ಸಂಗಾತಿ ತೊರೆದು ಹೋದರೆ ಅಥವಾ ಮರಣ ಹೊಂದಿದ ಸಂದರ್ಭದಲ್ಲಿ ಪುನರ್‌ವಸತಿ ಕಲ್ಪಿಸುವುದು ಹಾಗೂ ಅಂತಹ ಸಂಬಂಧಗಳಿಂದ ಜನಿಸಿದ ಮಕ್ಕಳ ಪಾಲನೆಯನ್ನು ನಿಭಾಯಿಸುವುದು ತೊಡಕುಂಟು ಮಾಡುತ್ತದೆ. ಸಹಜೀವನದ ಸಂಬಂಧದಲ್ಲಿ ಜತೆಗಿರುವ ವ್ಯಕ್ತಿಗಳು ತಮ್ಮ ಸಂಗಾತಿಯ ಆಸ್ತಿಗೆ ನೇರ ಉತ್ತರಾಧಿಕಾರದ ಹಕ್ಕನ್ನು ಅನುಭವಿಸಲು ಆಗದು' ಎಂದೂ ನ್ಯಾಯಾಲಯವು ವಿವರಿಸಿದೆ.