ನವದೆಹಲಿ: ಟೈಮ್ಸ್ ನೌ ಪ್ರಧಾನ ಸಂಪಾದಕ ಸ್ಥಾನಕ್ಕೆ ಪತ್ರಕರ್ತ ರಾಹುಲ್ ಶಿವಶಂಕರ್ ರಾಜೀನಾಮೆ ನೀಡಿದ್ದಾರೆ. ದಿಢೀರ್ ಬೆಳವಣಿಗೆ ಇದಾಗಿದ್ದು, ಅಚ್ಚರಿ ಮೂಡಿಸಿದೆ.
ಮಂಗಳವಾರದಂದು ರಾಹುಲ್ ಶಿವಶಂಕರ್ ಟೈಮ್ಸ್ ನೌನ ಎಡಿಟೋರಿಯಲ್ ಗ್ರೂಪ್ ಸೇರಿದಂತೆ ಎಲ್ಲಾ ವಾಟ್ಸ್ ಆಪ್ ಗ್ರೂಪ್ ಗಳಿಂದಲೂ ಹೊರಬಂದಿದ್ದಾರೆ. ರಾಜೀನಾಮೆ ನೀಡುವ ಬಗ್ಗೆ ರಾಹುಲ್ ಶಿವಶಂಕರ್ ಈ ಹಿಂದೆ ಯಾವುದೇ ಮಾಹಿತಿ ನೀಡಿರಲಿಲ್ಲ. ಮೂಲಗಳ ಪ್ರಕಾರ ಟೈಮ್ಸ್ ನೌನ ನಾಯಕತ್ವದ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಸಂಸ್ಥೆಯ ಮ್ಯಾನೇಜ್ಮೆಂಟ್ ರಾಹುಲ್ ಶಿವಶಂಕರ್ ಅವರೊಂದಿಗೆ ಅವರ ಪಾತ್ರದ ಬಗ್ಗೆ ಚರ್ಚೆ ನಡೆಸಿತ್ತು ಎಂದು ತಿಳಿದುಬಂದಿದೆ.
ರಾಹುಲ್ ಶಿವಶಂಕರ್ ಹಾಗೂ ಮ್ಯಾನೇಜ್ಮೆಂಟ್ ನಡುವೆ ಎಲ್ಲವೂ ಸರಿ ಇರಲಿಲ್ಲ ಹಾಗೂ ಟೈಮ್ಸ್ ಗ್ರೂಪ್ ನ ಎಂಡಿ ವಿನೀತ್ ಜೈನ್ ಚರ್ಚೆಯಲ್ಲಿ ಭಾಗಿಯಾಗಿದ್ದರು. ಜೂ.21 ರಾಹುಲ್ ಅವರಿಗೆ ಟೈಮ್ಸ್ ನೌ ನಲ್ಲಿ ಕಾರ್ಯನಿರ್ವಹಣೆಯ ಕೊನೆಯ ದಿನವಾಗಿರಲಿದೆ. 2005 ರಲ್ಲಿ ರಾಹುಲ್ ಶಿವಶಂಕರ್ ಟೈಮ್ಸ್ ನೌಗೆ ಸೇರಿದ್ದರು. 2013-16 ವರೆಗೆ ಅವರು ನ್ಯೂಸ್ ಎಕ್ಸ್ ನ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 2016 ರಲ್ಲಿ ಅರ್ನಬ್ ಗೋಸ್ವಾಮಿ ಟೈಮ್ಸ್ ನೌ ತೊರೆದಾಗ ರಾಹುಲ್ ಶಿವಶಂಕರ್ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡಿದ್ದರು.