ಪೆರ್ಲ :ಭಾರತೀಯ ಸಂಸ್ಕøತಿ ಮತ್ತು ಕಲೆಗಳ ಬಗ್ಗೆ ಮಕ್ಕಳಲ್ಲಿ ಎಳವೆಯಿಂದಲೇ ಸ್ಪೂರ್ತಿ ತುಂಬುವ ಕೆಲಸವನ್ನು ಹೆತ್ತವರು ಮಾಡಬೇಕು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಅಡಳಿತ ಮಂಡಳಿ ಸದಸ್ಯೆ, ನಿವೃತ್ತ ಶಿಕ್ಷಕಿ ನಳಿನಿ ಟೀಚರ್ ತಿಳಿಸಿದ್ದಾರೆ.
ಅವರು ರಂಗಚಿನ್ನಾರಿ ಕಾಸರಗೋಡು ಮತ್ತು ಕನ್ನಡ-ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ'ಕಾಸರಗೋಡು ಕನ್ನಡ ಹಬ್ಬ'ದ ಅಂಗವಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶ ಕಲೆಗಳ ತವರೂರು. ಯಕ್ಷಗಾನ, ಭರತನಾಟ್ಯ, ಕೂಚುಪುಡಿಯಂತಹ ಶ್ರೇಷ್ಠ ಕಲೆಗಳಿಂದ ಸಾಂಸ್ಕøತಿಕ ಮೌಲ್ಯ ಮತ್ತಷ್ಟು ಹೆಚ್ಚುವಂತಾಗಿದೆ ಎಂದು ತಿಳಿಸಿದರು.
ರಂಗಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗಾಗಿ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರಲ್ಲಿನ ಕಲಾಪ್ರತಿಭೆ ಹೊರಹೊಮ್ಮುವಂತೆ ಮಾಡುವಲ್ಲಿ ರಂಗಚಿನ್ನಾರಿ ಮಹತ್ವದ ಪಾತ್ರ ವಹಿಸಿದೆ. ಜತೆಗೆ ಮಹಿಳೆಯರನ್ನು ಒಟ್ಟುಗೂಡಿಸಿ ಅವರಲ್ಲಿನ ಸುಪ್ತಪ್ರತಿಭೆ ಅನಾವರಣಕ್ಕೆ ನಾರಿ ಚಿನ್ನಾರಿ ಸಂಘಟನೆ ವೇದಿಕೆ ಒದಗಿಸಿಕೊಟ್ಟಿರುವುದಾಗಿ ತಿಳಿಸಿದರು. ಕಲಾಪೋಷಕಿ ರತ್ನಾವತೀ ಬೈಕಾಡಿ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜು ಪ್ರಭಾರ ಪ್ರಾಂಶುಪಾಲ ಸುರೇಶ್ ಸ್ವಾಗತಿಸಿದರು. ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು. ರಂಗಚಿನ್ನರಿ ನಿರ್ದೇಶಕರಲ್ಲಿ ಒಬ್ಬರಾದ ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು.
ಬೈಕಾಡಿ ಪ್ರತಿಷ್ಠಾನದ ಅಂಗವಾಗಿರುವ ರತ್ನಕಲಾಲಯ ನಿರ್ದೇಶಕಿ ಅಕ್ಷತಾ ಬೈಕಾಡಿ ಅವರೊಂದಿಗೆ ರಶ್ಮೀ ಉಡುಪ ಮತ್ತು ರಶ್ಮೀ ಭಟ್ ಅವರಿಂದ ಭರತನಾಟ್ಯ ಜರುಗಿತು.