ಬದಿಯಡ್ಕ : 'ಮಗುವೊಂದು ಬೆಳೆಯುತ್ತಾ ಬೆಳೆಯುತ್ತಾ ತನ್ನೆಲ್ಲಾ ಕೆಲಸಗಳನ್ನೂ ತಾನೇ ಮಾಡಿಕೊಳ್ಳಲು ಕಲಿಯುತ್ತದೆ. ಅದೇ ರೀತಿ ಕಲಾವಿದನೂ ಕೂಡಾ ಬೆಳೆಯುತ್ತಾ ಸ್ವಾವಲಂಬಿಯಾಗಬೇಕು. ಇಂದಿನ ಕಾಲಘಟ್ಟದಲ್ಲಿ ಅದು ಅನಿವಾರ್ಯವೂ ಹೌದು' ಎಂದು ಶಿಕ್ಷಕ, ಯಕ್ಷಗಾನ ಕಲಾವಿದ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಹೇಳಿದರು.
ಅವರು ಭಾನುವಾರ ನೀರ್ಚಾಲಿನ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ನಡೆದ ಗ್ರಾಮ ಪರ್ಯಟನೆಯ 3ನೇ ಸರಣಿ ಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನದ ವೇಷಭೂಷಣಗಳ ಪರಿಚಯ, ಪ್ರಾತ್ಯಕ್ಷಿಕೆ ಹಾಗೂ ಪ್ರಾಯೋಗಿಕ ಏಕದಿನ ಶಿಬಿರದಲ್ಲಿ ಮಾತನಾಡಿದರು.
ಶಿಬಿರದ ನೇತೃತ್ವ ವಹಿಸಿದ್ದ ಯಕ್ಷಗಾನದ ಹಿಮ್ಮೇಳ-ಮುಮ್ಮೇಳ ಗುರುಗಳಾದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರು ಮಾತನಾಡಿ,'ಯಕ್ಷಗಾನದ ಸರ್ವಾಂಗಗಳ ಕಲಿಕೆಯಿಂದ ಕಲಾವಿದ ಪ್ರಬುದ್ಧನಾಗುತ್ತಾನೆ. ರಂಗಸಿರಿ ಸಾಂಸ್ಕøತಿಕ ವೇದಿಕೆಯ ಕಾರ್ಯಚಟುವಟಿಕೆಯು ವಿಸ್ತಾರವಾಗಿ ಕ್ರಿಯಾಶೀಲವೂ ಆಗಲು ಈ ಕಾರ್ಯಾಗಾರ ಸಹಾಯ ಮಾಡುತ್ತದೆ' ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನೇಪಥ್ಯ ಕಲಾವಿದ ಕೇಶವ ಕಿನ್ಯ ಮಾತನಾಡಿ,' ವೇಷಭೂಷಣಗಳನ್ನು ಕಟ್ಟಿ ಒಂದು ವೇಷ ಪೂರ್ಣವಾದಾಗ 108 ಕಟ್ಟುಗಳು ಬಿಗಿಯಲ್ಪಟ್ಟಿರುತ್ತದೆ. ಯಕ್ಷಗಾನದ ವೇಷಭೂಷಣಗಳು ಅದರ ಕಟ್ಟುವಿಕೆಯಲ್ಲಿ ಧಾರ್ಮಿಕವನ್ನು, ವೈಜ್ಞಾನಿಕವನ್ನೂ ಗುರುತಿಸಬಹುದು.' ಎಂದು ಹೇಳಿದರು. ಶಿಬಿರಾರ್ಥಿಯಾಗಿದ್ದ ಶಿಕ್ಷಕ ಶಶಿಧರ ಕುದಿಂಗಿಲ ಮಾತನಾಡಿ,'ಅತ್ಯಂತ ಉತ್ತಮ ಗುಣಮಟ್ಟದ ಶಿಬಿರವು ಹವ್ಯಾಸಿ ಕಲಾವಿದರಿಗೆ ಸ್ವಾವಲಂಬಿಯಾಗಿ ವೇಷಭೂಷಣಗಳನ್ನು ಧರಿಸಿಕೊಳ್ಳಲು ಇಂತಹಾ ಶಿಬಿರಗಳು ಅಪೂರ್ವ. ಈ ನಿಟ್ಟಿನಲ್ಲಿ ರಂಗಸಿರಿಯ ಶಿಬಿರವು ಆಸಕ್ತ ಹವ್ಯಾಸಿ ಕಲಾವಿದರಿಗೆ ತುಂಬಾ ಉಪಯುಕ್ತವಾಗಿತ್ತು ಎಂದು ಹೇಳಿದರು.
ಶಿಬಿರದಲ್ಲಿ ಸಾಕ್ಸ್, ಗೆಜ್ಜೆ, ಚಿಟ್ಟೆ ಪಟ್ಟಿ ಕಟ್ಟಿಕೊಳ್ಳುವಲ್ಲಿಂದ ತೊಡಗಿ ತುರಾಯಿ, ಪುಂಡುವೇಷ, ರಾಜವೇಷ, ನಾಟಕೀಯ, ಬಣ್ಣದ ವೇಷ ಸಹಿತ ಎಲ್ಲಾ ಬಗೆಯ ವೇಷಗಳನ್ನು ಕಟ್ಟುವ ಪ್ರಾತ್ಯಕ್ಷಿಕೆ ನಡೆಯಿತು. ಬಳಿಕ ಶಿಬಿರಾರ್ಥಿಗಳು ತಾವೇ ವೇಷಗಳನ್ನು ಕಟ್ಟಿಕೊಂಡು ಸ್ವಾವಲಂಬನೆಯ ಸಾಧನೆಗೆ ಮುಂದಡಿ ಇಟ್ಟರು. ಈ ಶಿಬಿರದಲ್ಲಿ ಪುಟಾಣಿ ಮಕ್ಕಳು, ಯುವಕಯುವತಿಯರು, ಹಿರಿಯರೂ ಸೇರಿದಂತೆ ಸುಮಾರು 20ಕ್ಕೂ ಮಿಕ್ಕಿದ ಕಲಾವಿದರು ಭಾಗವಹಿಸಿದ್ದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೇಶವ ಕಿನ್ಯ, ಪದ್ಮನಾಭ ಮಲ್ಲ, ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದ್ದರು.