ನವದೆಹಲಿ: ಉತ್ತರಾಖಂಡದಲ್ಲಿ ಹಿಂದೂ ಸಂಘಟನೆಗಳು ಕರೆ ನೀಡಿರುವ 'ಮಹಾಪಂಚಾಯತ್' ತಡೆಯಲು ಮತ್ತು ನಿರ್ದಿಷ್ಟ ಸಮುದಾಯದ ಸದಸ್ಯರನ್ನು ಗುರಿಯಾಗಿಸಿ ಮಾಡುವ ದ್ವೇಷ ಭಾಷಣಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. 'ಮಹಾಪಂಚಾಯತ್' ಗುರುವಾರ ನಡೆಯಲಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನು ಒಳಗೊಂಡ ರಜಾ ಕಾಲದ ಪೀಠವು, ವಕೀಲ ಶಾರೂಖ್ ಆಲಂ ಅವರಿಗೆ ಕಾನೂನಿನಲ್ಲಿ ಲಭ್ಯವಿರುವ ಪರಿಹಾರ ಪಡೆಯುವಂತೆ ಹಾಗೂ ಹೈಕೋರ್ಟ್ ಅಥವಾ ಸಂಬಂಧಿತ ಇತರ ಯಾವುದೇ ಪ್ರಾಧಿಕಾರ ಸಂಪರ್ಕಿಸಲು ಸ್ವಾತಂತ್ರ್ಯ ನೀಡಿತು.
'ಹೈಕೋರ್ಟ್ ಮತ್ತು ಜಿಲ್ಲಾಡಳಿತ ಸಂಪರ್ಕಿಸಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ವಿಷಯವನ್ನು ಅವರ ಗಮನಕ್ಕೆ ತಂದರೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನೀವು ಏಕೆ ಭಾವಿಸುತ್ತೀರಿ. ಹೈಕೋರ್ಟ್ ಮೇಲೆ ನಿಮಗೆ ನಂಬಿಕೆ ಇರಬೇಕು' ಎಂದು ನ್ಯಾಯಪೀಠ ಹೇಳಿದೆ.