ನವದೆಹಲಿ: ಎಸಿ ರೂಮ್ ನಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ ನಮ್ಮ ಕಾರ್ಯಕರ್ತರು. ದೇಶದ ಹಳ್ಳಿ, ಗುಡ್ಡ ಗಾಡುಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವವರು. ದೇಶದ ಸಂಕಲ್ಪ ಸಿದ್ಧಿಗೆ ಹಗಲಿರುಳು ಶ್ರಮಿಸುವ ಸಿಪಾಯಿಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ 9 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷವು ನಡೆಸುತ್ತಿರುವ ಜನಸಂಪರ್ಕ ಅಭಿಯಾನದ ಅಂಗವಾಗಿ ಮೇರಾ ಬೂತ್, ಸಬ್ಸೆ ಮಜಬೂತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಇದರಂತೆ ಪ್ರಧಾನಿ ಮೋದಿ ಅವರು, ರಾಜ್ಯದ 1918 ಸಂಘಟನಾ ಮಂಡಳಿಗಳು ಮತ್ತು ಬೂತ್‌ಗಳಲ್ಲಿ ಹಾಜರಿರುವ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಕೊಂಡಾಡಿದರು.
ನೀವು ಕೇವಲ ಬಿಜೆಪಿ ಕಾರ್ಯಕರ್ತರಲ್ಲ ದೇಶದ ಸಂಕಲ್ಪ ಸಿದ್ಧಿಗೆ ಹಗಲಿರುಳು ಶ್ರಮಿಸುವ ಸಿಪಾಯಿಗಳು. ನೀವು ನಿಮ್ಮ ಬೂತ್ನಲ್ಲಿ ವರ್ಷಪೂರ್ತಿ ಕೆಲಸ ಮಾಡುತ್ತಿರುತ್ತೀರಿ, ಪ್ರತಿ ಬಾರಿಯೂ ಮುಖ್ಯಮಂತ್ರಿಗಳು, ಸಚಿವರು, ಪಕ್ಷದ ಅಧ್ಯಕ್ಷರು, ಪ್ರದೇಶ ಕಾರ್ಯಸಮಿತಿ, ಜಿಲ್ಲಾ ಸಮಿತಿ, ಮಂಡಲ ಕಾರ್ಯಸಮಿತಿ ಸದಸ್ಯರೊಂದಿಗೆ ಸಭೆಗಳು ನಡೆಯುವುದು ಸಾಮಾನ್ಯ ಆದರೆ ಈ ಬಾರಿ ಬೇರು ಅಂದರೆ ಬೂತ್ ಮಟ್ಟದಿಂದಲೇ ಸಭೆಯನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮ ಮಾಡುತ್ತಿದ್ದೇವೆ, ಅದರಲ್ಲಿ ನಿಮ್ಮನ್ನು ಸೇರಿಸಿಕೊಳ್ಳಬೇಕೆಂಬುದು ಎಲ್ಲರ ಆಶಯವಾಗಿತ್ತು ಎಂದು ಹೇಳಿದರು.
‘ಬಿಜೆಪಿ ಕಾರ್ಯಕರ್ತರು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ. ದೇಶದ ಹಳ್ಳಿ, ಗುಡ್ಡ ಗಾಡುಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವವರು ಬಿಜೆಪಿಯವರು. ಹೀಗಾದಲ್ಲಿ ಮಾತ್ರ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ’ ಎಂದು ತಿಳಿಸಿದರು.
‘ಗ್ರಾಮ ಮಟ್ಟದ ಗೃಹಿಣಿಯರ ಸಮಸ್ಯೆಯನ್ನು ಕಾರ್ಯಕರ್ತರು ತಿಳಿಸಿದ್ದರಿಂದಲೇ ಉಜ್ವಲ ಯೋಜನೆ ನೀತಿರೂಪ ಪಡೆಯಿತು. ಅದು ಇಂದು ಜನಪ್ರಿಯ ಯೋಜನೆಯಲ್ಲಿ ಒಂದಾಗಿದೆ. ಜನರಿಗೆ ಅತಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಅದನ್ನು ಪರಿಹರಿಸುವಲ್ಲಿ ಕಾರ್ಯಕರ್ತರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಭಾಷಣದ ನಡುವೆ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರಿಸಿದರು. ಈ ಸಂದರ್ಭದಲ್ಲಿ ಮೋದಿಯವರ ಮಾತಿನುದ್ದಕ್ಕೂ ಕಾರ್ಯಕರ್ತರ ‘ಮೋದಿ... ಮೋದಿ...’ ಘೋಷಣೆ ಕೂಗಿದ್ದು ಮುಗಲಿಮುಟ್ಟುವಂತಿತ್ತು.