ವಾಷಿಂಗ್ಟನ್: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ಮುಂದಿನ 10 ವರ್ಷಗಳಲ್ಲಿ ಗಣಿಗಾರಿಕೆ ಆರಂಭಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಯೋಜನೆ ರೂಪಿಸಿದೆ. 2032ರ ವೇಳೆಗೆ ಚಂದ್ರನ ಮಣ್ಣನ್ನು ಅಗೆದು ಖನಿಜ ಹೊರತೆಗೆಯುವುದು ನಾಸಾ ಯೋಜನೆಯಾಗಿದೆ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.
ಸಂಪನ್ಮೂಲಗಳ ಬಗ್ಗೆ ಅರ್ಥಮಾಡಿಕೊಳ್ಳಲು ಶೋಧನಾ ಹಂತದಲ್ಲಿ ಹೂಡಿಕೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಪಾಯಗಳನ್ನು ಕಡಿಮೆ ಮಾಡಿಕೊಂಡು ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಬಾಹ್ಯ ಹೂಡಿಕೆ ಮಾಡುವುದರಲ್ಲಿ ಅರ್ಥವಿದೆ. ನಾವು ಅಕ್ಷರಶಃ ಚಂದ್ರನ ಮೇಲ್ಮೈಯನ್ನು ಸವರುತ್ತಿದ್ದೇವೆ ಎಂದು ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ನ ರಾಕೆಟ್ ವಿಜ್ಞಾನಿ ಗೆರಾಲ್ಡ್ ಸ್ಯಾಂಡರ್ಸ್ ಬ್ರಿಸ್ಬೇನ್ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಹೇಳಿದ್ದಾರೆ.
ಇಂಧನ ಅಥವಾ ಆಮ್ಲಜನಕ್ಕಾಗಿ ಚಂದ್ರನ ಮೇಲ್ಮೈ ಬಳಸುವ ಸಾಧ್ಯತೆಯಿರುವ ವಾಣಿಜ್ಯಿಕ ರಾಕೆಟ್ ಕಂಪನಿಗಳು ಮೊದಲ ಗ್ರಾಹಕರಾಗುವ ನಿರೀಕ್ಷೆಯಿದೆ. ಚಂದ್ರನ ಮೇಲೆ ಗಣಿಗಾರಿಕೆ ನಡೆಸುವ ಯೋಜನೆಯ ಉದ್ದೇಶವೇನು ಹಾಗೂ 'ಲೂನಾರ್ ಗೋಲ್ಡ್ ರಶ್' ಹೇಗೆ ಕೆಲಸ ಮಾಡಲಿದೆ ಎಂಬು ದನ್ನು ನಾಸಾ ತನ್ನ ವೆಬ್ಸೈಟ್ನಲ್ಲಿ 2015ರಲ್ಲಿ ಪ್ರಕಟಿಸಿದ್ದ ಲೇಖನದಲ್ಲಿ ವಿವರಿಸಿತ್ತು. ಮಹತ್ವಾಕಾಂಕ್ಷೆಯ ಆರ್ಟೆಮಿಸ್ ಮಿಷನ್ ಅಡಿಯಲ್ಲಿ 2025ರ ವೇಳೆಗೆ ಚಂದ್ರನಲ್ಲಿಗೆ ಮಾನವ ರನ್ನು ಕಳಿಸಲು ನಾಸಾ ಸಿದ್ಧತೆ ನಡೆಸುತ್ತಿರುವ ನಡುವೆಯೇ ಅದರ ಗಣಿಗಾರಿಕೆ ಯೋಜನೆಯ ಸುದ್ದಿ ಪ್ರಕಟವಾಗಿದೆ. 1972ರಲ್ಲಿ ನಾಸಾದ ಅಪೋಲೋ 17ರ ಗಗನಯಾನಿಗಳು ಚಂದ್ರನ ಮೇಲೆ ಕಾಲಿಟ್ಟ ನಂತರ ಭೂಮಿಯ ಉಪಗ್ರಹದ ಮೇಲೆ ಮಾನವರು ಇದುವರೆಗೆ ಇಳಿದಿಲ್ಲ. ಆರ್ಟೆಮಿಸ್ ಮಿಷನ್ನಲ್ಲಿ ಮೊದಲ ಮಹಿಳೆ ಮಾತ್ರವಲ್ಲದೆ ಒಬ್ಬರು ಅಶ್ವೇತ ವರ್ಣೀಯರು ಕೂಡ ಚಂದ್ರನ ಮೇಲೆ ಕಾಲೂರಲಿದ್ದಾರೆ.
ಟೆಸ್ಟ್ ಡ್ರಿಲ್ ರವಾನೆ
ಚಂದ್ರನ ಮೇಲಿನ ಮಣ್ಣನ್ನು ಪಡೆಯಲು ನಾಸಾ ಮೊದಲು ಟೆಸ್ಟ್ ಡ್ರಿಲ್ ಕಳಿಸಲಿದೆ. ಹಾಗೂ ಒಂದು ಸಂಸ್ಕರಣಾ ಸ್ಥಾವರವನ್ನು ಕೂಡ ಸ್ಥಾಪಿಸಲಿದೆ.
3 ಪ್ರಮುಖ ಮೂಲವಸ್ತು
ನೀರು, ಹೀಲಿಯಂ ಮತ್ತು ಅಪರೂಪದ ಖನಿಜಗಳು 3 ನಿರ್ಣಾಯಕ ಮೂಲವಸ್ತುಗಳು ಚಂದ್ರನಲ್ಲಿವೆ ಎಂದು ಭೂಗರ್ಭಶಾಸ್ತ್ರಜ್ಞರ ಸಮೀಕ್ಷೆಗಳನ್ನು ಉಲ್ಲೇಖಿಸಿ ನಾಸಾ ಹೇಳಿದೆ. ನೀರನ್ನು ರಾಕೆಟ್ ಇಂಧನವಾಗಿ ಪರಿವರ್ತಿಸಬಹುದು ಮತ್ತು ಅಣು ಸಮ್ಮಿಳನದಂತೆ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿಗಳಿಗೆ ಹೀಲಿಯಂ ನೆರವಾಗಬಹುದು ಎಂದು ನಾಸಾ ಹೇಳಿದೆ. ಚಂದ್ರನ ಬಂಡೆಗಳಲ್ಲಿ ಹೇರಳವಾಗಿ ಪತ್ತೆಯಾಗಿರುವ ಅಪರೂಪದ ಖನಿಜಗಳಾದ ಸ್ಕಾಂಡಿಯಂ ಮತ್ತು ಯಿಟ್ರಿಯಂ, ಆಧುನಿಕ ಇಲೆಕ್ಟ್ರಾನಿಕ್ಸ್ ವಲಯಕ್ಕೆ ಹೆಚ್ಚಿನ ಇಂಬು ಕೊಡುವ ನಿರೀಕ್ಷೆಯಿದೆ.