ಕಾಸರಗೋಡು: ನಗರದ ಹೊರವಲಯದ ತಳಂಗರೆ ಕಡವತ್ ಎಂಬಲ್ಲಿ ಭೂಮಿಯೊಳಗಿಂದ ವಿಶೇಷ ಶಬ್ದ ಕೇಳಿಬರಲಾರಂಭಿಸಿದ್ದು, ಈ ಪ್ರದೇಶದ ಹಕೀಂ ಅಜ್ಮಲ್ ಹಾಗೂ ಮಹಮ್ಮದ್ ನೌಫಾಲ್ ಎಂಬವರ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಶನಿವಾರ ತಡರತರಿಯಿಂದ ಈ ಪ್ರದಶದಲ್ಲಿ ವಿಶಿಷ್ಟ ಶಬ್ದ ಕೇಳಿಬರಲಾರಂಭಿಸಿದ್ದು, ಭಾನುವಾರ ರಆಥ್ರಿಯೂ ಮುಂದುವರಿದಾಗ ಜನತೆ ಭೀತಿಗೊಳಗಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ ಸಮೀಪದ ಎರಡು ಬಾವಿಗಳಲ್ಲಿ ನೀರಿನ ಮಟ್ಟದಲ್ಲೂ ಅಲ್ಪ ಏರಿಕೆಯಾಗಿದ್ದು, ಸೋಮವಾರ ಸಹಜ ಸ್ಥಿತಿಗೆಬಂದಿದೆ. ಬಾವಿ ನೀರಲ್ಲಿ ಉಪ್ಪಿನಂಶವೂ ಕಂಡುಬಂದಿದೆ.
ಹೊಳೆಯಿಂದ ನೂರು ಮೀ ದೂರದಲ್ಲಿ ಈ ಮನೆಗಳಿದೆ. ಭೂಗರ್ಭದೊಳಗೆ ಮಣ್ಣು ಹಾಗೂ ನೀರಿನ ಸ್ವಾಭಾವಿಕ ಚಲನೆಗೆ ತಡೆಯುಂಟಾದಾಗ ಈ ಶಬ್ದ ಉಂಟಾಗಲು ಸಾಧ್ಯತೆಯಿರುವುದಗಿ ಸಹಾಯಕ ಭೂಗರ್ಭ ವಿಜ್ಞಾನಿ ಅಮೃತಾ ತಿಳಿಸಿದ್ದಾರೆ. ಭೂಮಿಯಲ್ಲಿ ಬಿರುಕುಂಟಾದ ಅಥವಾ ಇತರ ಯಾವುದೇ ಅಸಹಜ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಆತಂಕಿತರಾಗಬೇಕಾಗಿಲ್ಲ ಎಂದು ಭೂಗರ್ಭ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಜಿಲ್ಲಾಧಿಕಾರಿಗೆ ಸಮಗ್ರ ಮಾಹಿತಿ ಸಲ್ಲಿಸಲಾಗಿದ್ದು, ಜಿಯೋಲೊಜಿಸ್ಟ್ ವಿಜಯ ಕುಮಾರ್ ಹಾಗೂ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.