ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಆಕಾಶವಾಣಿಯ 'ಮನದ ಮಾತು' ಕಾರ್ಯಕ್ರಮದಲ್ಲಿ ಮಣಿಪುರದಲ್ಲಿ ಹಿಂಸಾಚಾರ ಕುರಿತು ಮಾತನಾಡದಿರುವುದಕ್ಕೆ ಅವರ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.ಮಣಿಪುರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮತ್ತೊಂದು ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ಮೌನ ವಹಿಸಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ಭಾರತದ ಶ್ರೇಷ್ಠ ಸಾಮರ್ಥ್ಯಗಳಿಗಾಗಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಪ್ರಧಾನಿ, ಮಣಿಪುರವನ್ನು ಎದುರಿಸುತ್ತಿರುವ ಸಂಪೂರ್ಣ ಮಾನವ ನಿರ್ಮಿತ ಮಾನವೀಯ ದುರಂತದ ಬಗ್ಗೆ ಏನು? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಶಾಂತಿ ಕಾಪಾಡುವಂತೆ ಪ್ರಧಾನಿ ಮನವಿ ಮಾಡಿಲ್ಲ. ಲೆಕ್ಕಪರಿಶೋಧನೆ ಮಾಡಲಾಗದ ಪಿಎಂ-ಕೇರ್ಸ್ ಫಂಡ್ ಇದೆ ಆದರೆ ಪ್ರಧಾನಿ ಮಣಿಪುರದ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಎಂಬುದು ನಿಜವಾದ ಪ್ರಶ್ನೆ ಎಂದಿದ್ದಾರೆ.
ಭಾನುವಾರ ತಮ್ಮ ಮನ್ ಕಿ ಬಾತ್ ಮಾತನಾಡಿದ ಮೋದಿ, ನೈಸರ್ಗಿಕ ವಿಕೋಪಗಳ ಮೇಲೆ ಯಾರಿಗೂ ಯಾವುದೇ ನಿಯಂತ್ರಣ ಇರಲ್ಲ. ಆದರೆ ದೇಶದಲ್ಲಿ ಹಲವು ವರ್ಷಗಳಿಂದ ಅಭಿವೃದ್ಧಿಪಡಿಸಿದ ವಿಪತ್ತು ನಿರ್ವಹಣೆಯ ಶಕ್ತಿಯು ಇಂದು ಒಂದು ಉದಾಹರಣೆಯಾಗಿದೆ ಎಂದು ಹೇಳಿದ್ದರು. ಕಾಂಗ್ರೆಸ್ ನೇತೃತ್ವದ ಮಣಿಪುರದ ಹತ್ತು ವಿಪಕ್ಷಗಳು ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರ 'ಮೌನ'ವನ್ನು ಪ್ರಶ್ನಿಸಿದ್ದು, ಶಾಂತಿ ಕಾಪಾಡಲು ಮನವಿ ಮಾಡುವಂತೆ ಒತ್ತಾಯಿಸಿವೆ.