ಕಾಸರಗೋಡು: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿಕನ್ನಡ ಮಾಧ್ಯಮ ಕಲಿಕೆಗೆ ಮಲಯಾಳ ಶಿಕ್ಷಕರ ನೇಮಕಾತಿ ಪ್ರತಿಭಟಿಸಿ ಕಳೆದ ಮೂರು ವಾರಕ್ಕೂ ಹೆಚ್ಚು ಕಾಲದಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ನೂರಾರು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ಬದಲು ಬೆರಳೆಣಿಕೆಯ ಶಿಕ್ಷಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನವಾಗುತ್ತಿದೆ.
ಅಡೂರು ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆಯ 8ರಿಂದ ಹತ್ತನೇ ತರಗತಿ ವರೆಗಿನ ಸಾಮಾಜಿಕ ವಿಜ್ಞಾನ ಕಲಿಸಲು ಮಲಯಾಳ ಮಾಧ್ಯಮ ಶಿಕ್ಷಕಿಯನ್ನು ನೇಮಿಸಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರ ಪ್ರತಿಭಟನೆ ನಡುವೆ ಶಿಕ್ಷಣ ಇಲಾಖೆ ನಿರ್ದೇಶಕರಿಂದ ವಿಶೇಷ ಅನುಮತಿಯೊಂದಿಗೆ ಈ ಮಲಯಾಳಿ ಶಿಕ್ಷಕಿ ಶಾಲೆಗೆ ಬಂದು ಸೇರ್ಪಡೆಗೊಂಡಿದ್ದಾರೆ.
ಜಿಲ್ಲೆಯ ಅಂಗಡಿಮೊಗರು, ಬೇಕೂರು, ಮೂಡಂಬೈಲು, ಆದೂರು ಸೇರಿದಂತೆ ವಿವಿಧ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ನಡೆದಿದ್ದು, ಕೆಲವು ಶಾಲೆಗಳಲ್ಲಿ ಪ್ರಬಲ ವಿರೋಧದಿಂದ ಈ ಶಿಕ್ಷಕರನ್ನು ಬೇರೆಡೆಗೆ ನಿಯೋಜಿಸಲಾಗಿದೆ. ಸರ್ಕಾರಕ್ಕೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಬಗ್ಗೆ ನೈಜ ಕಾಳಜಿಯಿದ್ದಲ್ಲಿ, ಈಗಾಗಲೇ ಕನ್ನಡ ಮಾಧ್ಯಮಕ್ಕೆ ನೇಮಕಗೊಂಡಿರುವ ಮಲಯಾಳಿ ಶಿಕ್ಷಕರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿ ಸಮಸ್ಯೆ ಪರಿಹರಿಸಿಕೊಳ್ಳಲಿ. ಸಮಸ್ಯೆ ಪರಿಹಾರಕ್ಕಿಂತ ಕನ್ನಡಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟವಾಡುವುದು ಎಷ್ಟು ಸರಿ ಎಂದು ಕನ್ನಡಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಕೋಟ್ಟಾಯಂ ನಿವಾಸಿ ಮಲಯಾಳಿ ಶಿಕ್ಷಕರೊಬ್ಬರನ್ನು ಅಂಗಡಿಮೊಗರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ಭೌತಶಾಸ್ತ್ರವಿಭಾಗಕ್ಕೆ ನೇಮಕಗೊಳಿಸಿರುವುದು ವಿವಾದಕ್ಕೆಡೆಯಾಗಿತ್ತು.
ತಪ್ಪು ತಿದ್ದಿಕೊಳ್ಳಲಿ:
ಲೋಕಸೇವಾ ಆಯೋಗ 2014ರ ಬ್ಯಾಚ್‍ನಲ್ಲಿ ನಡೆಸಿದ ಅಧ್ಯಾಪಕರ ನೇಮಕಾತಿ ಸಂದರ್ಭ ಉಂಟಾಗಿರುವ ಲೋಪದಿಂದ ತಲೆಯೆತ್ತಿರುವ ಸಮಸ್ಯೆ ಇಂದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉರುಳಾಗಿ ಪರಿಣಮಿಸುತ್ತಿದೆ. ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ಕನ್ನಡ ವಿದ್ವಾಂಸರನ್ನು ಒಳಗೊಂಡ ಆಯ್ಕೆ ಸಮಿತಿಯ ಮೂಲಕವೇ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಈಗ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂಬುದು ಸರ್ಕಾರದ ಧೋರಣೆಯಾಗಿದೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಕನ್ನಡ ಅರಿಯದ ಶಿಕ್ಷಕರಲ್ಲಿ ಕೆಲವರನ್ನು ವರ್ಗಾವಣೆಗೊಳಿಸಿದರೆ, ಇನ್ನುಕೆಲವರನ್ನು ಮೈಸೂರಿನ ಪ್ರಾದೇಶಿಕ ಭಾಷಾ ಕೇಂದ್ರಕ್ಕೆ ಕನ್ನಡ ನೋಯಿಂಗ್ ಸರ್ಟಿಫಿಕೇಟ್ ಕಲಿಕೆಗಾಗಿ ಕಳುಹಿಸಿಕೊಟ್ಟಿತ್ತು! ಕೋರ್ಸ್ ಮುಗಿಸಿ ಬಂದರೂ ಮಲಯಾಳಿ ಶಿಕ್ಷಕರ ಕನ್ನಡ ಭಾಷಾಜ್ಞಾನ ಸುಧಾರಿಸಿರಲಿಲ್ಲ. ನೇಮಕಾತಿಯಲ್ಲಿ ಉಂಟಾಗಿರುವ ಲೋಪದ ಬಗ್ಗೆ ಚರ್ಚಿಸದೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಹಿತಕಾಯಲು ಸರ್ಕಾರ ಮುಂದಾಗಬೇಕು ಎಂದು ವಿದ್ಯಾರ್ಥಿಗಳ ಹೆತ್ತವರು ಆಗ್ರಹಿಸಿದ್ದಾರೆ.