ಬದಿಯಡ್ಕ: ಮಳೆಗಾಲದ ಮೊದಲ ಶನಿವಾರದಂದು ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಹಲಸಿನ ಉಪ್ಪುಸೊಳೆ ಸಂಗ್ರಹಣಾ ಕಾರ್ಯಚಟುವಟಿಕೆಗಳು ಜರಗಿತು.
ಸುಮಾರು ಐವತ್ತರಷ್ಟು ಹಲಸಿನ ಕಾಯಿಗಳನ್ನು ಪಾಲಕರ ಮೂಲಕ ಸಂಗ್ರಹಿಸಲಾಗಿತ್ತು. ಬೆಳಗ್ಗೆ ಪಾಲಕರು ಹಾಗೂ ಶಾಲಾ ಹಿತೈಷಿಗಳು ಜೊತೆಸೇರಿ ಹಲಸಿನ ಕಾಯಿಯನ್ನು ಬಿಡಿಸುವ ಕಾರ್ಯವನ್ನು ಮಾಡಿದರು. ಅಧ್ಯಾಪಕ ವೃಂದದವರು ಜೊತೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ವಿದ್ಯಾರ್ಥಿಗಳು ಹಲಸಿನ ಸೊಳೆಯನ್ನು ಉಪ್ಪಿನಲ್ಲಿ ದಾಸ್ತಾನೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ದಿನನಿತ್ಯದ ಮಧ್ಯಾಹ್ನದ ಊಟಕ್ಕೆ ಪದಾರ್ಥವಾಗಿ ಇವುಗಳನ್ನು ಉಪಯೋಗಿಸಲಾಗುತ್ತದೆ. ಪಲ್ಯ, ಸಾಂಬಾರು ಮೊದಲಾದ ರುಚಿಕರವಾದ ಹಾಗೂ ಆರೋಗ್ಯದಾಯಕ ಸವಿಯೂಟ ಮಕ್ಕಳಿಗೆ ದೊರಕುತ್ತದೆ. ಪ್ರತಿವರ್ಷವೂ ವಿದ್ಯಾಪೀಠದಲ್ಲಿ ಉಪ್ಪುಸೊಳೆ ಸಂಗ್ರಹಣಾ ಪ್ರಕ್ರಿಯೆ ಸಾಗಿಬಂದಿದೆ.