HEALTH TIPS

ನಕಲಿ ಔಷಧಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿ: ಕೇಂದ್ರ ಆರೋಗ್ಯ ಸಚಿವ ಮಾಂಡವೀಯಾ

            ವದೆಹಲಿ : ನಕಲಿ ಔಷಧಗಳ ಕುರಿತು ಭಾರತವು ಶೂನ್ಯ ಸಹಿಷ್ಣು ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಅವರು ಹೇಳಿದ್ದಾರೆ.

              ಭಾರತದಲ್ಲಿ ತಯಾರಾದ ಕೆಮ್ಮಿನ ಔಷಧ ಸೇವಿಸಿ ಗಾಂಬಿಯಾದ 66 ಮತ್ತು ಉಜ್ಬೇಕಿಸ್ತಾನ 18 ಮಕ್ಕಳು ಮೃತಪಟ್ಟ ವರದಿಯಾಗಿತ್ತು.

              ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, '125 ಔಷಧ ಕಂಪನಿಗಳಲ್ಲಿ ನಾವು ಅಪಾಯದ ಸಂಭವನೀಯತೆ ಆಧರಿತ ವಿಶ್ಲೇಷಣೆಯನ್ನು ಕೈಗೊಂಡಿದ್ದೆವು. ಅವುಗಳಲ್ಲಿ 71 ಔಷಧ ತಯಾರಿಕಾ ಸಂಸ್ಥೆಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ ಮತ್ತು 18 ಸಂಸ್ಥೆಗಳಿಗೆ ತಯಾರಿಕೆ ನಿಲ್ಲಿಸುವಂತೆ ಹೇಳಲಾಗಿದೆ' ಎಂದು ತಿಳಿಸಿದ್ದಾರೆ.

              ಪಿಟಿಐ ವಿಡಿಯೊಗೆ ಅವರು ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ. ದೇಶದಲ್ಲಿ ಗುಣಮಟ್ಟದ ಔಷಧಗಳನ್ನು ತಯಾರಿಸುವ ನಿಟ್ಟಿನಲ್ಲಿ ನಿರಂತರ ಮತ್ತು ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಕಲಿ ಔಷಧ ಸೇವಿಸಿ ಯಾರೊಬ್ಬರೂ ಮರಣ ಹೊಂದದಂತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಔಷಧ ನಿಯಂತ್ರಕಗಳು ಸದಾ ಎಚ್ಚರಿಕೆ ಕಾಯ್ದುಕೊಂಡಿವೆ ಎಂದಿದ್ದಾರೆ.

              'ನಾವು ಜಗತ್ತಿನ ಔಷಧ ತಯಾರಕರು. ಉತ್ತಮ ಗುಣಮಟ್ಟದ ಔಷಧ ತಯಾರಕರು ಎಂಬ ಭರವಸೆಯನ್ನು ಪ್ರತಿಯೊಬ್ಬರಿಗೂ ನೀಡಲು ಬಯಸುತ್ತೇವೆ' ಎಂದರು.

           'ಭಾರತದಲ್ಲಿ ತಯಾರಾದ ಔಷಧಗಳ ಗುಣಮಟ್ಟದ ಕುರಿತು ಪ್ರಶ್ನೆಗಳೆದ್ದ ವೇಳೆ ನಾವು ವಸ್ತುಸ್ಥಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಔಷಧ ಸೇವಿಸಿ ಗಾಂಬಿಯಾ ಮಕ್ಕಳು ಮೃತಪಟ್ಟರು ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಹೇಳಲಾಗಿತ್ತು. ವಾಸ್ತವಾಂಶಗಳ ಕುರಿತ ಮಾಹಿತಿ ಕೋರಿ ನಾವು ಆರೋಪಿಸಿದವರಿಗೆ ಪತ್ರ ಬರೆದಿದ್ದೆವು. ಯಾರೊಬ್ಬರೂ ವಾಸ್ತವಾಂಶಗಳ ಬಗ್ಗೆ ತಿಳಿಸಲಿಲ್ಲ' ಎಂದರು.

'ಸಾವಿಗೆ ಕಾರಣವೇನೆಂದು ನಾವು ಪರಿಶೀಲಿಸಿದೆವು. ಆಗ ಒಂದು ಮಗುವಿಗೆ ಅತಿಸಾರ ಇರುವುದು ತಿಳಿದುಬಂತು. ಅತಿಸಾರದಿಂದ ಬಳಲಿದ್ದ ಮಗುವಿಗೆ ಕೆಮ್ಮಿನ ಔಷಧ ನೀಡಿ‌ದ್ದು ಯಾರು' ಎಂದು ಅವರು ಪ್ರಶ್ನಿಸಿದರು.

           ನಕಲಿ ಎಂದು ಆರೋಪಿಸಲಾದ ಕೆಮ್ಮಿನ ಔಷಧದ ಒಟ್ಟು 24 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ನಾಲ್ಕು ಮಾದರಿಗಳು ವಿಫಲವಾದವು. ರಫ್ತು ಮಾಡಲು ತಯಾರಿಸಿರುವ ಒಂದು ಬ್ಯಾಚ್‌ನ ಔಷಧದಲ್ಲಿ, ನಾಲ್ಕು ಮಾದರಿಗಳು ವಿಫಲವಾಗಲು ಹೇಗೆ ಸಾಧ್ಯ?. ಆದರೂ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು.

             ರಫ್ತಾಗುವ ಕೆಮ್ಮಿನ ಔಷಧಗಳನ್ನು ಪರೀಕ್ಷೆಗೆ ಒಳಪಡಿಸುವುದನ್ನು ಜೂನ್‌ 1ರಿಂದ ಕಡ್ಡಾಯಗೊಳಿಸಲಾಗಿದೆ ಎಂದು ವಿದೇಶ ವಾಣಿಜ್ಯ ವ್ಯವಹಾರಗಳ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಕಳೆದ ತಿಂಗಳು ಪ್ರಕಟಣೆಯಲ್ಲಿ ತಿಳಿಸಿತ್ತು.

ಔಷಧ ತಯಾರಿಕೆ ಪ್ರಮಾಣದಲ್ಲಿ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ ಮತ್ತು ಉಪಲಬ್ಧತೆಯಲ್ಲಿ 14ನೇ ಸ್ಥಾನದಲ್ಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries