ಕಾಸರಗೋಡು: ಕಾಸರಗೋಡಿನ ವಿಲೀನೀಕರಣ ಹೋರಾಟದಲ್ಲಿ ತಮ್ಮ ಕೊನೆಯುಸಿರಿನ ತನಕ ಹೋರಾಟ ನಡೆಸಿದ ಧೀಮಂತ ನಾಯಕ ಡಾ. ಕಯ್ಯಾರ ಕಿಞಣ್ಣ ರೈ ಈ ನಾಡು ಕಂಡ ಅಪರೂಪದ ಹಾಗೂ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು ಎಂದು ಗಡಿಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.
ಅವರು ಜೋಡುಕಲ್ಲು ಕಯ್ಯಾರು ರಾಮಕೃಷ್ಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರಿನ ಮಂಜುನಾಥ ಎಜ್ಯುಕೇಶನ್ ಟ್ರಸ್ಟ್‍ಸಹಯೋಗದೊಂದಿಗೆ ಗುರುವಾರ ನಡೆದ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ 108ನೇ ಜನ್ಮದಿನಾಚರಣೆ , ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕøತಿಕ ಉತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಕಯ್ಯಾರ ಅವರು ಒಂದು ಕೈಯಲ್ಲಿ ಲೇಖನಿ ಹಾಗೂ ಇನ್ನೊಂದರಲ್ಲಿ ನೇಗಿಲು ಹಿಡಿದು ಸಾಹಿತ್ಯ ಹಾಗೂ ಕೃಷಿಯಲ್ಲಿ ತಮ್ಮನ್ನು ಸಮಾನವಾಗಿ ತೊಡಗಿಸಿಕೊಂಡಿದ್ದರು. ಗಡಿನಾಡಿನಲ್ಲಿ ಕನ್ನಡದ ಹೋರಾಟಕ್ಕೆ ಹೊಸ ಆಯಾಮ ತಂದುಕೊಟ್ಟಿರುವ ಡಾ. ಕಯ್ಯಾರ ಅವರು ದೇಶಕ್ಕೆ ಸಲ್ಲಿಸಿರುವ ಮಹತ್ತರ ಕೊಡುಗೆಯಿಂದ ಶ್ರೇಷ್ಠರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಹುಭಾಷಾ ನೆಲೆವೀಡು ಕಾಸರಗೋಡಿನಲ್ಲಿ ನಿರಂತರ ನಡೆಯುವ ಕನ್ನಡದ ಚಟುವಟಿಕೆಗಳಿಂದ ಭಾಷೆ ಮತ್ತಷ್ಟು ಉನ್ನತಿಯತ್ತ ಸಾಗುವಂತಾಗಿದೆ. ಡಾ. ಕಯ್ಯಾರ ಕಿಞಣ್ಣ ರೈ ಅವರ ಕನ್ನಡಪರ ಹೋರಾಟ ಇಲ್ಲಿನ ಕನ್ನಡ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ಕಾಸರಗೋಡಿನ ಕನ್ನಡ ಚಟುವಟಿಕೆಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯ ಸಹಕಾರ ಮುಂದುವರಿಸಲಿರುವುದಾಗಿ ತಿಳಿಸಿದರು. ಹಿರಿಯ ಸಾಹಿತಿ, ಚಿಂತಕ ಪ್ರೊ. ಕೆ.ಇ ರಾಧಾಕೃಷ್ಣ ಬೆಂಗಳೂರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಮಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ರಾಜೇಶ್ ಜಿ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಟ್ರಸ್ಟ್ ಅಧ್ಯಕ್ಷ ಚನಿಯಪ್ಪ ನಾಯ್ಕ್, ಶಿವರಾಮ ಕಾಸರಗೋಡು, ಎ.ಆರ್. ಸುಬ್ಬಯ್ಯಕಟ್ಟೆ, ರಮಾ ದೇವಮ್ಮ, ಅನುಪಮಾ ರಾಘವೇಂದ್ರ, ಜೆಡ್.ಎ ಕಯ್ಯಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಡಾ. ಪ್ರಮೀಳಾ ಮಾಧವ್ ಅವರಿಗೆ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಪ್ರಶಸ್ತಿ, ಡಾ. ಸಿ. ಸೋಮಶೇಖರ್, ಗುರುಪ್ರಸಾದ್ ಕೋಟೆಕಣಿ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಡಾ. ಜೆ.ಆರ್. ಮನೋಜ್ ಶರ್ಮ, ಡಾ. ಪಿ.ವಿ ಪತ್ತಾರ್, ಡಾ. ವಿಶ್ವನಾಥಾಚಾರ್ ಅವರಿಗೆ ಗೌರವ ಪುರಸ್ಕಾರ ನೀಡಲಾಯಿತು. ಪತ್ರಕರ್ತ ರವಿ ನಾಯ್ಕಾಪು ಪ್ರಶಸ್ತಿಪುರಸ್ಕ್ರತರ ಪರಿಚಯ ನೀಡಿದರು.ಮಂಜುನಾಥ ಎಜುಕೇಶನ್ ಟ್ರಸ್ಟ್‍ನ ಟ್ರಸ್ಟಿ ಕೆ.ಪಿ ಮಂಜುನಾಥ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾಗೀತ ಬಾಯಾರು ವಂದಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವ, ಉಪನ್ಯಾಸ, ಕವಿಗೋಷ್ಠಿ, ಗಾನ ವೈಭವ, ಸಿಂಗಾರಿಮೇಳ, ಯೋಗನೃತ್ಯ, ಕವಿಗಾನ-ಕನ್ನಡ ಗಾನ, ಸಮೂಹ ಗಾಯನ ನಡೆಯಿತು.