ನವದೆಹಲಿ:ವಾಹನ ತಯಾರಕರು ಟ್ರಕ್‌ಗಳ ಚಾಲಕ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವುದು ಶೀಘ್ರವೇ ಕಡ್ಡಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಮಂಗಳವಾರ ಇಲ್ಲಿ ತಿಳಿಸಿದರು.
ನವದೆಹಲಿ:ವಾಹನ ತಯಾರಕರು ಟ್ರಕ್‌ಗಳ ಚಾಲಕ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವುದು ಶೀಘ್ರವೇ ಕಡ್ಡಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಮಂಗಳವಾರ ಇಲ್ಲಿ ತಿಳಿಸಿದರು.
ಮಹಿಂದ್ರಾ ಲಾಜಿಸ್ಟಿಕ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ,'ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಟ್ರಕ್ ಚಾಲಕರ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣವನ್ನು ಕಡ್ಡಾಯಗೊಳಿಸುವ ಕಡತಕ್ಕೆ ನಾನು ಸಹಿ ಹಾಕಿದ್ದೇನೆ. ಟ್ರಕ್‌ಗಳನ್ನು ಓಡಿಸುವವರನ್ನು ಚೆನ್ನಾಗಿ ನೋಡಿಕೊಳ್ಳುವುದು ಅಗತ್ಯವಾಗಿದೆ ' ಎಂದು ಹೇಳಿದರು.
'ನಮ್ಮ ಚಾಲಕರು 43-47 ಡಿ.ಸೆ.ಗಳ ಕಠಿಣ ತಾಪಮಾನದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಸಚಿವನಾದ ಬಳಿಕ ಎಸಿ ಕ್ಯಾಬಿನ್‌ಗಳನ್ನು ತರಲು ನಾನು ಉತ್ಸುಕನಾಗಿದ್ದೆ. ಆದರೆ ಇದರಿಂದಾಗಿ ಟ್ರಕ್‌ಗಳ ಬೆಲೆಗಳು ಹೆಚ್ಚುತ್ತವೆ ಎಂದು ಕೆಲವರು ವಿರೋಧಿಸಿದ್ದರು' ಎಂದರು.
ಭಾರತದಲ್ಲಿ ಚಾಲಕರ ಕೊರತೆಯಿದೆ,ಹೀಗಾಗಿ ಟ್ರಕ್ ಚಾಲಕರು ದಿನದಲ್ಲಿ 14ರಿಂದ 16 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬೆಟ್ಟು ಮಾಡಿದ ಗಡ್ಕರಿ,ಇತರ ದೇಶಗಳಲ್ಲಿ ಟ್ರಕ್ ಚಾಲಕರು ನಿಗದಿತ ಅವಧಿಗೆ ಕರ್ತವ್ಯ ನಿರ್ವಹಿಸುತ್ತಾರೆ,ಅವರನ್ನು ಹೆಚ್ಚು ದುಡಿಸಲು ನಿರ್ಬಂಧವಿದೆ ಎಂದು ಹೇಳಿದರು.
ಎಸಿ ಕ್ಯಾಬಿನ್‌ಗಳನ್ನು ಹೊಂದಿರುವ ಟ್ರಕ್‌ಗಳು ರಸ್ತೆಗಿಳಿಯಲು ಯಾವುದೇ ಗಡುವನ್ನು ಗಡ್ಕರಿ ಉಲ್ಲೇಖಿಸಲಿಲ್ಲ. ಇದು 2025ರಿಂದ ಅನುಷ್ಠಾನಗೊಳ್ಳಬಹುದು ಎಂದು ಕೆಲವು ವರದಿಗಳು ತಿಳಿಸಿವೆ.