ಹಮೀರ್ಪುರ : ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ವ್ಯಾಪಾರ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಭಾರತವೇನು ಎಂಬುದನ್ನು ವಿವರಿಸುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲಾನ್ ಮಸ್ಕ್ ಅವರ ಹೇಳಿಕೆ ಭಾರತದ ನಾಯಕತ್ವ ಮತ್ತು ಪ್ರಧಾನಿ ಮೋದಿಯವರ ಬಗ್ಗೆ ಬಹಳಷ್ಟನ್ನು ವಿವರಿಸುತ್ತದೆ. ವಿಶ್ವದಾದ್ಯಂತ ದೊಡ್ಡ ವ್ಯಕ್ತಿಗಳು ಕೂಡ ಈಗ ಪ್ರಧಾನಿ ಮೋದಿಯನ್ನು ಹೊಗಳುತ್ತಿದ್ದಾರೆಂದು ಹೇಳಿದರು. ನ್ಯೂಯಾರ್ಕ್ ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಲಾನ್ ಮಸ್ಕ್ ಅವರು, ಮೋದಿಯವರೊಂದಿಗಿನ ಈ ಭೇಟಿ ನನಗೆ ರೋಮಾಂಚನಕಾರಿ ಅನುಭವ ನೀಡಿದೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು.
ಇದರಿಂದಾಗಿ ಅವರ ಬಗ್ಗೆ ನನಗೆ ತಿಳಿದಿತ್ತು. ಅವರು ನನಗೆ ಭಾರತಕ್ಕೆ ಆಮಂತ್ರಣ ನೀಡಿದ್ದಾರೆ. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ.
ಮೋದಿಯವರು ನಿಜವಾಗಿಯೂ ಭಾರತದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ.
ಅಲ್ಲದೇ ಅವರು ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಈಗ ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ಭಾರತದ ಅಭಿವೃದ್ಧಿಗೆ ಸಹಕಾರವಾಗಲಿದೆ. ಇದೇ ವರ್ಷದಲ್ಲಿ ಟೆಸ್ಲಾ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸಲು ಸ್ಥಳವನ್ನು ಗುರುತಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅಲ್ಲದೆ, ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಎಂದೂ ತಿಳಿಸಿದ್ದರು.