ಪಾಟ್ನ: ಗಂಗಾ ನದಿಯ ಮೇಲ್ಭಾಗದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆ ಖಗಾರಿಯಾ ಜಿಲ್ಲೆಯಲ್ಲಿ ಕುಸಿದುಬಿದ್ದ ಘಟನೆ ನಡೆದ 3 ವಾರಗಳಲ್ಲಿ ಇಂಥಹದ್ದೇ ಮತ್ತೊಂದು ಘಟನೆ ನಡೆದಿದೆ.
ಕಿಶನ್ ಗಂಜ್ ಜಿಲ್ಲೆಯಲ್ಲಿರುವ ಮೇಲ್ಸೇತುವೆ ಈಗ ಕುಸಿದುಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಮೇಚಿ ನದಿಗೆ ಕಟ್ಟಲಾಗಿದ್ದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಎನ್‌ಎಹೆಚ್‌ಐ ನ ಯೋಜನಾ ನಿರ್ದೇಶಕ ಅರವಿಂದ್ ಕುಮಾರ್ ಹೇಳಿದ್ದಾರೆ. ಎನ್ ಹೆಚ್-327E ಯಶಸ್ವಿಯಾಗಿ ಪೂರ್ಣಗೊಂಡಿದ್ದರೆ, ಕಿಶನ್ ಗಂಜ್- ಕಥಿಹಾರ್ ನಡುವೆ ಸಂಪರ್ಕ ಕಲ್ಪಿಸಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಘಡದಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ಘಟನೆ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರಿರುವ ತಜ್ಞರ ಸಮಿತಿ ನೇಮಕ ಮಾಡಲಾಗಿದೆ. ಪೈಲಿಂಗ್ ಪ್ರಕ್ರಿಯೆ (piling process) ವೇಳೆ ಮಾನವ ದೋಷದಿಂದಾಗಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂ.04 ರಂದು ಖಗಾರಿಯಾ- ಭಗಲ್ ಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸಬೇಕಿದ್ದ ಮೇಲ್ಸೇತುವೆಯೊಂದು ಕುಸಿದುಬಿದ್ದಿತ್ತು. ಘಟನೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.