ಇಂಫಾಲ: ಪಶ್ಚಿಮ ಇಂಫಾಲ ಜಿಲ್ಲೆಯ ಲ್ಯಾಂಫೆಲ್‌ನಲ್ಲಿರುವ ಮಣಿಪುರದ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ನಿವಾಸಕ್ಕೆ ಬುಧವಾರ ರಾತ್ರಿ ಅಪರಿಚಿತರು ಬೆಂಕಿ ಹಚ್ಚಿದ್ದಾರೆ.
ಪೂರ್ವ ಇಂಫಾಲದ ಖಾಮೆಲಾಕ್ ಗ್ರಾಮದಲ್ಲಿ ಬುಧವಾರ ಶಂಕಿತ ಉಗ್ರರು ನಡೆಸಿದ ದಾಳಿ ವೇಳೆ 9 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸಚಿವೆ ಕಿಪ್‌ಗೆನ್ ಕುಕಿ ಸಮುದಾಯದ ನಾಯಕಿ. ನಿವಾಸದಲ್ಲಿ ಯಾರು ಇಲ್ಲದ ವೇಳೆ ದಾಳಿಕೋರರು ಬೆಂಕಿ ಹಚ್ಚಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಯಾವುದೇ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿಲ್ಲ.
ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯದ ನಡುವೆ ಒಂದು ತಿಂಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 310 ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸೇನೆ ಮತ್ತು ಅರೆ ಪಡೆಗಳನ್ನು ನಿಯೋಜಿಸಲಾಗಿದೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯ ಮೇ 3ರಂದು ಮೆರವಣಿಗೆ ಆಯೋಜಿಸಿತ್ತು. ಆ ಬಳಿಕ ಮಣಿಪುರದಲ್ಲಿ ಘರ್ಷಣೆಗಳು ಭುಗಿಲೆದ್ದಿವೆ.
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೇಯಿ ಸಮುದಾಯ, ಇಂಫಾಲದ ಕಣಿವೆಗಳಲ್ಲಿ ಹೆಚ್ಚಾಗಿ ನೆಲಿಸಿವೆ. ಬುಡಕಟ್ಟು ಜನಾಂಗಗಳಾದ ನಾಗಾಗಳು ಮತ್ತು ಕುಕಿಗಳು ಶೇಕಡಾ 40 ರಷ್ಟಿದ್ದು, ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.