ನವದೆಹಲಿ: ಹಿಂದೂ ಸಮುದಾಯದವರ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ 'ಆದಿಪುರುಷ್' ಸಿನಿಮಾಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ನೀಡಿರುವ ಪ್ರಮಾಣಪತ್ರವನ್ನು ರದ್ದುಪಡಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ವಕೀಲರಾದ ಮಮತಾ ರಾಣಿ ಎಂಬುವರು ಪಿಐಎಲ್ ಸಲ್ಲಿಸಿದ್ದು, ಸಿನಿಮಾದಲ್ಲಿ 'ವಾಲ್ಮೀಕಿ ರಾಮಾಯಣ'ದ ಮೂಲರಚನೆಯನ್ನೇ ಬದಲಾಯಿಸಲಾಗಿದೆ. ಭಗವಾನ್ ರಾಮ, ಹನುಮಂತ ಹಾಗೂ ಇತರ ದೇವತೆಗಳ ಪಾತ್ರಗಳನ್ನು ವಿಕೃತವಾಗಿ ಚಿತ್ರಿಸಲಾಗಿದೆ. ಇದು ಸಿನಿಮಾಟೊಗ್ರಾಫ್ ಕಾಯ್ದೆ 1952ರ ಸೆಕ್ಷನ್ 5ಬಿಯ ಪ್ರಕಾರ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಭಗವಾನ್ ರಾಮ ಮತ್ತು ಹನುಮಂತ ಅವರ ದೈಹಿಕ ಚಿತ್ರಣ ಹಾಗೂ ಸಿನಿಮಾದಲ್ಲಿನ ಇತರ ಪಾತ್ರಗಳು ಇವರೊಂದಿಗೆ ನಡೆಸುವ ಸಂಭಾಷಣೆಯು ಆ ದೇವರನ್ನು ಪೂಜಿಸುವ ಮೌಲ್ಯಗಳನ್ನು ಸಂಪೂರ್ಣವಾಗಿ ವಿರೂಪಗೊಳಿಸುವಂತಿವೆ. ಅಷ್ಟೇ ಅಲ್ಲ, ಭಗವಾನ್ ಹನುಮಂತನನ್ನು 'ಭಜರಂಗಿ' ಎಂದು ಇಂದ್ರಜಿತ್ ಪಾತ್ರವು ಅವಹೇಳನಕಾರಿಯಾಗಿ ಸಂಬೋಧಿಸಿದೆ. ಇಂಥ ಭಾಷೆಯನ್ನು ಭಾರತದಲ್ಲಿ ಗಲ್ಲಿ ಹುಡುಗರು ಮಾತ್ರ ಬಳಸುತ್ತಾರೆ' ಎಂದೂ ಅವರು ವಾದಿಸಿದ್ದಾರೆ.
'ಧರ್ಮವನ್ನು ನಿಂದನೆ ಮಾಡುವಂಥ ಇಂಥ ಪ್ರಕರಣಗಳು ಹೊಸದೇನಲ್ಲ. ಈ ಹಿಂದೆ ಬಾಲಿವುಡ್‌ನ ನಿರ್ದೇಶಕರು, ನಟರು ಮತ್ತು ನಿರ್ಮಾಪಕರು ಸನಾತನ ಧರ್ಮ ಅಥವಾ ಹಿಂದೂ ಸಮುದಾಯದ ಮೂಲ ಮೌಲ್ಯಗಳು ಮತ್ತು ತತ್ವಗಳನ್ನು ನಿಂದನೆಗೆ ನಿರಂತರವಾಗಿ ಪ್ರಯತ್ನಿಸಿದ್ದಾರೆ. ಅಂತೆಯೇ 'ಆದಿಪುರುಷ್' ಸಿನಿಮಾದಲ್ಲಿ ಸಿನಿಮಾಟೊಗ್ರಾಫ್ ಕಾಯ್ದೆ 1952ರ ಸೆಕ್ಷನ್ 5ಬಿಯ ಸಂಪೂರ್ಣ ಉಲ್ಲಂಘನೆಯಾಗಿದ್ದರೂ ಇದುವರೆಗೆ ಸಿಬಿಎಫ್‌ಸಿಯು ಯಾವುದೇ ಕ್ರಮ ಕೈಗೊಂಡಿಲ್ಲ' ಎಂದೂ ಮಮತಾ ಅವರು ಅರ್ಜಿಯಲ್ಲಿ ದೂರಿದ್ದಾರೆ.