ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಅವರು ಇಂದು ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಮುಗಿಸಿಕೊಂಡು ಬಂದ ನಂತರ ಸಂಪುಟದ ಹಿರಿಯ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು. ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಇಂದು ಮುಂಜಾನೆ ಅಮಿತ್ ಶಾ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಣಿಪುರದ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ನಿನ್ನೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಶಾಗೆ ವಿವರಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂಸಾಚಾರವನ್ನು ಹೆಚ್ಚಿನ ಮಟ್ಟಿಗೆ ನಿಯಂತ್ರಿಸಲು ಸಮರ್ಥವಾಗಿವೆ ಎಂದು ಹೇಳಿದರು.
ಮಣಿಪುರದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಅಮಿತ್ ಶಾ ನೇತೃತ್ವದಲ್ಲಿ ಶನಿವಾರ ಸರ್ವಪಕ್ಷ ಸಭೆ ನಡೆಸಲಾಗಿತ್ತು. ಪಿಎಂ ಮೋದಿ ಅವರು ಈಜಿಪ್ಟ್ ಪ್ರವಾಸದ ಫೋಟೋ, ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮತ್ತು ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.
ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ನನ್ನ ಈಜಿಪ್ಟ್ ಭೇಟಿ ಐತಿಹಾಸಿಕವಾಗಿದೆ. ಇದು ಭಾರತ-ಈಜಿಪ್ಟ್ ಸಂಬಂಧಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.
ಪ್ರಧಾನಿ ಮೋದಿ ಜೂನ್ 21-24 ರವರೆಗೆ ಯುಎಸ್‌ಗೆ ಪ್ರವಾಸ ಕೈಗೊಂಡಿದ್ದರೆ, ಜೂನ್ 24-25 ರವರೆಗೆ ಈಜಿಪ್ಟ್‌ಗೆ ಪ್ರವಾಸದಲ್ಲಿದ್ದರು.