ಕಾಸರಗೋಡು : ಜಿಲ್ಲಾ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೌಸ್‍ಬೋಟ್ ಮಾಲೀಕರ ಸಭೆ ನೀಲೇಶ್ವರದ ಕೊಟ್ಟಪುರಂನಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು
ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯ ಉಪಕ್ರಮದ ಮೇರೆಗೆ ಈ ಸಭೆಯನ್ನು ಆಯೋಜಿಸಲಾಗಿತ್ತು. ಜಿಲ್ಲೆಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ವಲಿಯಪರಂ ಹಿನ್ನೀರ ಹೌಸ್‍ಬೋಟ್ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರವಾಸಿಗರ ಸುರಕ್ಷತೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿ ಕಾನೂನು ಉಲ್ಲಂಘಿಸುವ ಬೋಟ್‍ಗಳ ಪರವಾನಗಿ ರದ್ದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಪರವಾನಗಿ ಇಲ್ಲದ 23 ಬೋಟ್‍ಗಳು ಪರವಾನಗಿ ಪಡೆಯುವವರೆಗೆ ಕಾರ್ಯನಿರ್ವಹಿಸಕೂಡದು. ಪರವಾನಗಿ ಇಲ್ಲದ ದೋಣಿಗಳನ್ನು ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ಪಡೆದಿರುವ ಬೋಟ್‍ಗಳಲ್ಲಿ ಸರ್ಕಾರ ಅನುಮತಿ ಮಂಜೂರು ಮಡಿರುವುದಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಕೊಂಡೊಯ್ಯದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಯಿತು. ಪ್ರವಾಸಿಗರ ಸುರಕ್ಷತೆಯ ಬಗ್ಗೆ ಮಾಲೀಕರು ಕಾರ್ಮಿಕರಿಗೆ ತಿಳುವಳಿಕೆ ನೀಡಬೇಕು ಮತ್ತು ಕಾರ್ಮಿಕರು ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅಲ್ಲದೆ ಬೋಟ್ ಮಾಲಕರು ಸಲ್ಲಿಸಿರುವ ನಾನಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 35 ಹೌಸ್‍ಬೋಟ್‍ಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.
ನೀಲೇಶ್ವರಂ ನಗರಸಭೆ ಉಪಾಧ್ಯಕ್ಷ ಮುಹಮ್ಮದ್ ರಫಿ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ನವೀನ್ ಬಾಬು, ಕಣ್ಣೂರು ಬಂದರು ಅಧಿಕಾರಿ ಕ್ಯಾಪ್ಟನ್ ಪ್ರದೀಶ್ ನಾಯರ್, ಕಾಂಞಂಗಾಡ್‍ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ಅಗ್ನಿಶಾಮಕ ಠಾಣಾಧಿಕಾರಿ ಪವಿತ್ರನ್ ಎ.ವಿ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹುಸೇನ್ ಎಂ., ಕೌನ್ಸಿಲರ್‍ಗಳಾದ ಶಂಸುದ್ದೀನ್ ಅರಂಚಿರ, ಶಫೀಕ್ ಕೊಟ್ಟಾಪುರ, ಕಾಸರಗೋಡು ಹೌಸ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಶಿವದಾಸ್ ಕೆ., ಅಪಾಯ ವಿಶ್ಲೇಷಕ ಪ್ರೇಮ್ ಜಿ ಪ್ರಕಾಶ್, ಕಾಸರಗೋಡು ಹೌಸ್ ಬೋಟ್ ಮಾಲೀಕರ ಕಾರ್ಯದರ್ಶಿ ಆರ್. ಕೆ. ಕಾಮತ್, ಒಳನಾಡು ನೌಕಾಯಾನ ಸಹಾಯಕ ಎಂಜಿನಿಯರ್ ಸುಧಾಕರನ್ ಕೆ.ವಿ. ಉಪಸ್ಥಿತರಿದ್ದರು.