ಸಾಕಪ್ಪಾ ಸಾಕು, ನನಗೆ ಎಲ್ಲಾ ಸಾಕಾಗಿದೆ ಎಂದು ಕೆಲವೊಮ್ಮೆ ಅಂದ್ಕೊಳ್ಳುತ್ತೇವೆ. ಜೀವನ ಏಕೋ ನಮ್ಮ ಕಂಟ್ರೊಲ್‌ನಲ್ಲಿ ಇಲ್ಲ, ನಾನು ಏನೋ ಮಾಡಲಿಕ್ಕೆ ಹೋದಾಗ ಮತ್ತೇನೋ ಆಗುತ್ತಿದೆ ಎಂದು ಅನಿಸುತ್ತದೆ. ಈ ರೀತಿಯಾದಾಗ ಒಂದು ರೀತಿಯ ಹತಾಶೆ, ಮುಂದೇನು ಮಾಡಬೇಕೆಂದು ತೋಚುವುದೇ ಇಲ್ಲ. ಹಾಗಂತ ಅಯ್ಯೋ ... ಅಂತ ಗೋಳಾಡುವ ಬದಲಿಗೆ ಆ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸಬೇಕು. ಇಂಥ ಸಮಯದಲ್ಲಿ ಇಷ್ಟು ಮಾಡಿ ಖಂಡಿತ ನೀವು ಫೀನಿಕ್ಸ್‌ನಂತೆ ನವೋಲ್ಲಾಸದಿಂದ ಮರಳಿ ಬರಲು ಸಾಧ್ಯವಾಗುವುದು.
1. ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ
ನಮಗೆ ಏನಾದರೂ ಸಮಸ್ಯೆ ಉಂಟಾಗುತ್ತಿದ್ದರೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಮೊದಲಿಗೆ ಸಮಸ್ಯೆಯೇನು ಎಂದು ಗೊತ್ತಾಗಬೇಕು. ಆವಾಗ ನಿಮಗೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದು. ಪರಿಹಾರ ಸಿಗದೇ ಇರುವ ಸಮಸ್ಯೆ ಈ ಜಗತ್ತಿನಲ್ಲಿಯೇ ಇಲ್ಲ, ನಾವು ಪ್ರಯತ್ನಿಸಬೇಕಷ್ಟೇ...
2. ನಿಮಗಾಗಿ ಸಮಯ ನೀಡಿ
ಕೆಲವೊಮ್ಮೆ ತುಂಬಾ ಕೆಟ್ಟ ಆಲೋಚನೆಗಳು ಬರುತ್ತದೆ, ಬದುಕಿನಲ್ಲಿ ಈ ರೀತಿಯೆಲ್ಲಾ ಕೆಟ್ಟದಾಗುತ್ತಿರುವುದು ನನಗೆ ಮಾತ್ರ ಎಂದು ಅನಿಸಲಾರಂಭಿಸುವುದು. ಆದರೆ ಕೆಟ್ಟ ಆಲೋಚನೆಗಳಿಂದ ಹೊರಬರಲು ಪ್ರಯತ್ನಿಸಿ, ಆಗಿದ್ದು ಆಗಿ ಹೋಯ್ತು, ಮುಂದೇನು, ಹೇಗೆ ಅದರಿಂದ ಹೊರಬೇಕೆಂದು ಆಲೋಚನೆ ಮಾಡಿ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ, ನಿಮ್ಮ ಸಾಮರ್ಥ್ಯವನ್ನು ನಿಮ್ಮಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವ್ಯಕ್ತಿ ಮತ್ತೊಬ್ಬರಿಲ್ಲ.
3. ಸಲಹೆ ಪಡೆಯಿರಿ
ನಿಮ್ಮ ಆಪ್ತರ ಬಳಿ ನಿಮ್ಮ ಸಮಸ್ಯೆ ಹೇಳಿಕೊಂಡರೆ ಮನಸ್ಸು ಹಗುರವಾಗುವುದು, ಅಗ್ಯತಬಿದ್ದರೆ ಅವರಿಂದ ಸಲಹೆ ಪಡೆಯಿರಿ. ಕೌನ್ಸಿಲಿಂಗ್ ಬೇಕೆನಿಸಿದರೆ ಅದನ್ನು ಪಡೆಯಿರಿ. ಇವೆಲ್ಲಾ ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.
4. ಚಿಕ್ಕ ಸಂಗತಿಯೇ ದೊಡ್ಡದಾಗುವುದು
ಬದಲಾವಣೆ ಚಿಕ್ಕದಾಗಿದ್ದರು ಅದು ನಿಮ್ಮ ಜೀವನದಲ್ಲಿ ದೊಡ್ಡ ಪರಿಣಾಮ ಬೀರುವುದು. ಮೊದಲ ಇಡುವ ಹೆಜ್ಜೆಯೇ ಸಾವಿರ ಹೆಜ್ಜೆಗೆ ಪ್ರಾರಂಭವಾಗುವುದು. ಆದ್ದರಿಂದ ಚಿಕ್ಕದು -ದೊಡ್ಡದು ಎಂದು ತಲೆಕೆಡಿಸಿಕೊಳ್ಳದೆ ನಿಮ್ಮ ಬದುಕನ್ನು ಒಳ್ಳೆಯದಾಗಿ ಪ್ರಾರಂಭಿಸಿ.
5. ತಾಳ್ಮೆ ಮುಖ್ಯ
ಈಗ ಏನಾದರೂ ಆಯ್ತು ಎಂದಾದರೆ ಅದುವೇ ಶಾಶ್ವತವಲ್ಲ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಕತ್ತಲು ಬಂದ ಮೇಲೆ ಬೆಳಕು ಬಂದೇ ಬರುತ್ತದೆ. ಇದು ತತ್ತ್ವವಲ್ಲ. ನಿಮ್ಮ ಬದುಕಿನಲ್ಲಿ ಇಂದು ಕಷ್ಟ ಬಂದಿರುತ್ತದೆ, ಸ್ವಲ್ಪ ದಿನಗಳು ಕಳೆದ ಮೇಲೆ ಆ ರೀತಿ ಆಗಿದ್ದರಿಂದಲೇ ನನಗೆ ಒಳ್ಳೆಯದಾಯ್ತು ಎಂದು ಹೇಳುತ್ತೀರ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿ ಈ ರೀತಿ ಹೇಳಿಯೇ ಹೇಳುತ್ತಾರೆ. ಆದ್ದರಿಂದ ಬದುಕನ್ನು ಸದಾ ಧನಾತ್ಮಕವಾಗಿ ಸ್ವೀಕರಿಸಿ.