ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಮಟ್ಟದ ಶಾಲೆಗಳ ಪ್ರವೇಶೋತ್ಸವ ಬೇಂಗಪದವು ಶ್ರೀಗಿರಿಜಾಂಬಾ ಎಎಲ್ ಪಿ ಶಾಲೆಯಲ್ಲಿ ಗುರುವಾರ ನಡೆಯಿತು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಮಕ್ಕಳ ಹೊಸ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗುರು ಭಕ್ತಿ, ಪುಸ್ತಕ ಪ್ರೀತಿ ಹಾಗೂ ತಾನು ಕಲಿಯುವ ಶಾಲೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಸಾಧ್ಯ. ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಸವಲತ್ತುಗಳನ್ನು ಘೋಷಿಸುತ್ತಿದ್ದು ಅದನ್ನು ಸಕಾಲಿಕವಾಗಿ ಶಾಲಾ ಅಧಿಕೃತರಿಗೆ ತಲುಪಿಸುವಲ್ಲಿ ಗ್ರಾ.ಪಂ.ಪ್ರಧಾನ್ಯತೆ ವಹಿಸುತ್ತಿದೆ. ಮಕ್ಕಳಿಗಾಗಿ ಶಾಲೆಯಲ್ಲಿ ಶೌಚಾಲಯ, ಕುಡಿನೀರು ಶುದ್ಧಿಕರಣ ಯಂತ್ರ, ಕಂಪ್ಯೂಟರ್,ಲಾಪ್ ಟಾಪ್ ಸಹಿತ ಶಿಕ್ಷಣಕ್ಕೆ ಅಗತ್ಯ ಇರುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಮುಂದೆಯು ವಿಪುಲವಾದ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಎಣ್ಮಕಜೆ ಗ್ರಾ.ಪಂ.ಸದಸ್ಯೆ ಉಷಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್ ಸಿಯ ಸಂಯೋಜಕ ಪ್ರಶಾಂತ್ ಕುಮಾರ್ ಬಿ.ಜಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಷ್ಣರಾಜ ಪಿ. ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ಹಾಗೂ ವಿಶೇಷ ಸಾಧನೆಗೈದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಸಿಆರ್ ಸಿ ಸಂಯೋಜಕ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ ಯಕ್ಷಿತಾ ಪ್ರಾರ್ಥನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಎಸ್ ಸ್ವಾಗತಿಸಿ, ನಳಿನಿ ಬಿ. ವಂದಿಸಿದರು. ಹರಿಣಾಕ್ಷಿ ಬಿ. ನಿರೂಪಿಸಿದರು.