ಪ್ರಸ್ತುತ ಮುಂಗಾರು ಋತುವಿನ ಆರಂಭದಲ್ಲಿ ವಾರ್ಷಿಕ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಭಾರತದ ಭೌಗೋಳಿಕ ಪ್ರದೇಶದ ಅರ್ಧದಷ್ಟು ಭಾಗವು ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚಿನ ಮಳೆಯ ಕೊರತೆಯನ್ನು ಈಗ ಎದುರಿಸುತ್ತಿದ್ದರೆ, ಇದೇ ವೇಳೆ ಪಶ್ಚಿಮ ಮತ್ತು ಈಶಾನ್ಯದ ಕೆಲವು ರಾಜ್ಯಗಳು ಪ್ರವಾಹಕ್ಕೂ ತುತ್ತಾಗಿವೆ.
ಮಳೆ ಆಧಾರಿತ ಮುಂಗಾರು ಬೆಳೆಗಳ ಮೇಲೆ ಪ್ರಸ್ತುತ ಹವಾಮಾನವು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ. ಎಲ್ ನಿನೋ ಸನ್ನಿವೇಶ ಸೃಷ್ಟಿಯಾದರೆ ಕೊರತೆ ಅಧಿಕವಾಗಲಿದೆ.
ವಾರ್ಷಿಕ ನೈಋತ್ಯ ಮುಂಗಾರು ಜೂನ್ನಿಂದ ಸೆಪ್ಟೆಂಬರ್ವರೆಗೆ ನಾಲ್ಕು ತಿಂಗಳುಗಳಲ್ಲಿ ಬೀಸುತ್ತದೆ. ಮುಂಗಾರು ಬೆಳೆಗಳನ್ನು ಬೆಳೆಯುವ ಅವಧಿ ಇದಾಗಿದ್ದು, ಜೂನ್ ತಿಂಗಳಲ್ಲಿ ಬಿತ್ತನೆ ಕೈಗೊಳ್ಳಲಾಗುತ್ತದೆ.
ಭಾರತವು ಸಾಮಾನ್ಯವಾಗಿ ತನ್ನ ವಾರ್ಷಿಕ ಮಳೆಯ ಮುಕ್ಕಾಲು ಭಾಗದಷ್ಟು ಮಳೆಯನ್ನು ಮುಂಗಾರು ಋತುವಿನಲ್ಲಿಯೇ ಪಡೆದುಕೊಳ್ಳುತ್ತದೆ. ಈ ವರ್ಷ ಮುಂಗಾರು ಆಗಮನ ಒಂದು ವಾರ ತಡವಾಗಿದೆ. ಜೂನ್ 1-22 ರ ನಡುವಿನ ಅವಧಿಯಲ್ಲಿ ದೇಶದ ವಿವಿಧೆಡೆ ಮಳೆ ಶುರುವಾಗಿದೆ. 50 ವರ್ಷಗಳ ಸರಾಸರಿಗೆ ಹೋಲಿಸಿದರೆ, ಈ ಬಾರಿ ಇದುವರೆಗೆ ದೇಶಾದ್ಯಂತ ಶೇಕಡಾ 31ರಷ್ಟು ಮಳೆ ಕೊರತೆ ಇದೆ. ಈ ಮಳೆ ಅಭಾವದಲ್ಲಿ ಭೌಗೋಳಿಕವಾಗಿಯೂ ಸಾಕಷ್ಟು ಏರುಪೇರು ಇದೆ. ಭಾರತದ ಶೇಕಡಾ 47 ಭೌಗೋಳಿಕ ಪ್ರದೇಶದಲ್ಲಿ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಈಗ ಕಂಡುಬಂದಿದೆ. ದೇಶದ ಶೇಕಡಾ 20ರಷ್ಟು ಪ್ರದೇಶದಲ್ಲಿ ಸರಾಸರಿಗಿಂತ ಶೇಕಡಾ 20ರಷ್ಟು ಅಥವಾ ಅದಕ್ಕಿಂತ ಹೆಚ್ಚು ಮಳೆ ಸುರಿದಿದೆ.
ಎಲ್ ನಿನೋ ಬೆಳವಣಿಗೆಯ ಸಾಧ್ಯತೆಯು ಶೇಕಡಾ 70ರಷ್ಟಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಘಟಕವು ಜೂನ್ ಆರಂಭದಲ್ಲಿ ಹೇಳಿದೆ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತವು ಎಲ್ ನಿನೋ ಪರಿಸ್ಥಿತಿಗಳ ಹೊರಹೊಮ್ಮುವಿಕೆಯನ್ನು ಜೂನ್ 8ರಂದು ಘೊಷಿಸಿದೆ. ಇದು ಬಲಗೊಳ್ಳಲಿದೆ ಎಂದೂ ಹೇಳಿದೆ. ಎಲ್ ನಿನೋ ಸನ್ನಿವೇಶವು ಭಾರತದಲ್ಲಿ ಮುಂಗಾರು ಋತುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಎಲ್ ನಿನೋ ವಿದ್ಯಮಾನ ಜರುಗಿದ 15 ವರ್ಷಗಳ ಪೈಕಿ 9 ವರ್ಷಗಳಲ್ಲಿ ಮಳೆ ಕೊರತೆ ಆಗಿದೆ. ಜುಲೈ ವೇಳೆಗೆ ಎಲ್ ನಿನೋ ಪರಿಸ್ಥಿತಿಗಳು ಅಧಿಕವಾಗುವ ಸಾಧ್ಯತೆಯಿದ್ದು, ಇದರಿಂದಾಗಿ ಜುಲೈ-ಆಗಸ್ಟ್ನಲ್ಲಿ ಕಡಿಮೆ ಮಳೆ ಸುರಿಯಬಹುದಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಎಲ್ ನಿನೋ ಅಥವಾ ಎಲ್ ನಿನೋ- ದಕ್ಷಿಣ ಚಲನೆಯು ಪೆಸಿಫಿಕ್ ಮಹಾಸಾಗರದ ಉಷ್ಣವಲಯದ ಮೇಲ್ಮೈನ ತಾಪಮಾನದಿಂದ ರೂಪುಗೊಳ್ಳುತ್ತದೆ. ಇದು ಪ್ರತಿ ಎರಡರಿಂದ ಏಳು ವರ್ಷಕ್ಕೆ ಒಮ್ಮೆ ಉಂಟಾಗುತ್ತದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಹವಾಮಾನ ವ್ಯವಸ್ಥೆಯನ್ನು ಹಾಳುಗೆಡುವುವಷ್ಟು ಇದು ಪ್ರಬಲವಾಗಿರುತ್ತದೆ. ಮುಂಗಾರು ಸಂದರ್ಭದಲ್ಲಿ ಎಲ್ ನಿನೋ ಸನ್ನಿವೇಶ ಸೃಷ್ಟಿಯಾದರೆ ಮಳೆ ಸುರಿಯುವ ಪ್ರಮಾಣ ಕುಂಠಿತವಾಗುತ್ತದೆ.ಅರ್ಧಕ್ಕರ್ಧ ಬಿತ್ತನೆ ಕುಂಠಿತ: ಮುಂಗಾರು ಋತುವಿನಲ್ಲಿ ರೈತರು ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ನಾಟಿ ಮಾಡುತ್ತಾರೆ. ಪ್ರಮುಖ ಏಕದಳ ಬೆಳೆಯಾದ ಭತ್ತದ ನಾಟಿಯನ್ನೂ ಈ ಋತುವಿನಲ್ಲಿ ಕೈಗೊಳ್ಳುತ್ತಾರೆ. ಜೂನ್ 16ರವರೆಗೆ ಹೋಲಿಸಿದರೆ, ಭತ್ತದ ನಾಟಿ ಪ್ರದೇಶವು ಕಳೆದ ವರ್ಷಕ್ಕಿಂತ ಶೇಕಡಾ 15ರಷ್ಟು ಕಡಿಮೆಯಾಗಿದೆ ಎಂದು ಕೃಷಿ ಸಚಿವಾಲಯದ ಅಂಕಿ-ಅಂಶಗಳು ಸೂಚಿಸುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೇಳೆಕಾಳುಗಳ ನಾಟಿ ಪ್ರದೇಶವು ಶೇಕಡಾ 57ರಷ್ಟು ಹಾಗೂ ಎಣ್ಣೆಕಾಳುಗಳ ನಾಟಿ ಪ್ರದೇಶವು ಶೇಕಡಾ 14ರಷ್ಟು ಕಡಿಮೆಯಾಗಿದೆ. ಒಟ್ಟಾರೆಯಾಗಿ, ಎಲ್ಲಾ ಬೆಳೆಗಳನ್ನು ಗಣನೆಗೆ ತೆಗೆದುಕೊಂಡರೆ ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಶೇಕಡಾ 49ರಷ್ಟು ಕಡಿಮೆಯಾಗಿದೆ.
ಬೆಳೆ ಉತ್ಪಾದನೆಯ ಮೇಲೆ ಪರಿಣಾಮ
ಭತ್ತದಂತಹ ಬೆಳೆಗಳಿಗೆ, ಜುಲೈ ಅಂತ್ಯದವರೆಗೆ ನಾಟಿ ಮಾಡಲು ಅವಕಾಶ ಇರುತ್ತದೆ. ಭತ್ತ ಬೆಳೆಯುವ ಹೆಚ್ಚಿನ ರೈತರು ನೀರಾವರಿ ಸೌಲಭ್ಯ ಹೊಂದಿದ್ದಾರೆ. ಅಲ್ಲದೆ, ಅಂತರ್ಜಲವನ್ನು ಸೆಳೆಯಲು ಪಂಪ್ಗಳನ್ನು ಬಳಸಿಕೊಂಡು ತಮ್ಮ ಬೆಳೆಗಳನ್ನು ಉಳಿಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದ್ದಾರೆ. ಆದರೆ, ಮುಂಗಾರು ವಿಳಂಬವಾದರೆ, ಮಳೆಯಾಶ್ರಿತ ಜಮೀನಿನಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುವ ಸಣ್ಣ ಮತ್ತು ಅತಿ ಸಣ್ಣ ರೈತರು ಅಪಾಯಕ್ಕೆ ಸಿಲುಕುತ್ತಾರೆ. ಹಾಗಾಗಿ ಮಳೆ ಕೊರತೆಯಾದರೆ ಏಕದಳೇತರ ಆಹಾರ ಬೆಳೆಗಳಿಗೆ ಅಧಿಕ ಹೊಡೆತ ಬೀಳುವ ಸಾಧ್ಯತೆ ಇದೆ. ಉತ್ತರದ ದಿಕ್ಕಿನಲ್ಲಿ ದೇಶದ ಮೂಲಕ ಮುಂಗಾರು ಹಾದುಹೋಗುತ್ತಿದ್ದಂತೆಯೇ ಮಳೆ ವ್ಯಾಪ್ತಿಯು ಸುಧಾರಿಸುತ್ತದೆ. ಅಗತ್ಯ ಮಳೆಯಾಗದ ಸಂದರ್ಭದಲ್ಲಿ ರೈತರು ತಮ್ಮ ಹೊಲಗಳನ್ನು ಬಿತ್ತದೆ ಖಾಲಿ ಬಿಡುತ್ತಾರೆ. ಹೀಗಾಗಿ, ಮುಂಗಾರು ಮಧ್ಯ ಋತುವಿನ ದೀರ್ಘಾವಧಿಯ ಶುಷ್ಕ ವಾತಾವರಣವು ಬೆಳೆ ಆರೋಗ್ಯ ಮತ್ತು ಉತ್ಪಾದನೆಗೆ ಹೆಚ್ಚು ಅಪಾಯವನ್ನುಂಟು ಮಾಡುವ ಸಾಧ್ಯತೆ ಅಧಿಕವಾಗಿರುತ್ತದೆ.
ಬೆಲೆ ಏರಿಕೆ ಬಾಧಿಸಲಿದೆಯೇ?
ಖಾದ್ಯ ತೈಲ ಮತ್ತು ತರಕಾರಿ ಬೆಲೆಗಳಲ್ಲಿನ ತೀವ್ರ ಕುಸಿತದಿಂದಾಗಿ ಗ್ರಾಹಕ ಆಹಾರ ಹಣದುಬ್ಬರವು ಮೇ ತಿಂಗಳಲ್ಲಿ ಶೇಕಡಾ 2.9ಕ್ಕೆ ಇಳಿದಿದೆ. ಆದರೆ, ಧಾನ್ಯಗಳ ಹಣದುಬ್ಬರವು ಗರಿಷ್ಠ ಶೇಕಡಾ 13ರಷ್ಟಿದೆ. ಕೆಲವು ಬೇಳೆಕಾಳುಗಳ ಚಿಲ್ಲರೆ ಬೆಲೆಗಳು ನಿರಂತರವಾಗಿ ಹೆಚ್ಚಾಗಿ ಗಗನಕ್ಕೇರಿವೆ. ತೊಗರಿ ಬೇಳೆ ಕಳೆದ ವರ್ಷಕ್ಕಿಂತ ಶೇಕಡಾ 26ರಷ್ಟು ದುಬಾರಿಯಾಗಿದೆ. ಮಳೆ ಕೊರತೆಯಿಂದಾಗಿ ಈ ಸರಕುಗಳ ಬೆಲೆಗಳು ಇನ್ನಷ್ಟು ಹೆಚ್ಚಾಗಬಹುದಾಗಿದೆ. ಸೋಯಾಬೀನ್, ನೆಲಗಡಲೆ ಮತ್ತು ಸೂರ್ಯಕಾಂತಿಗಳಂತಹ ದೇಶೀಯವಾಗಿ ಬೆಳೆಯುವ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಕುಸಿತದ ಪರಿಣಾಮವು ಗ್ರಾಹಕರಿಗಿಂತ ಹೆಚ್ಚಾಗಿ ರೈತರಿಗೆ ಬಾಧಿಸುವ ಸಾಧ್ಯತೆ ಇದೆ. ಏಕೆಂದರೆ, ಕೊರತೆ ಉಂಟಾದರೆ ಅಗ್ಗದ ದರದಲ್ಲಿ ಅಡುಗೆ ಎಣ್ಣೆಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. 2021ರ ಜೂನ್ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ. ಆದರೆ, ಮೂರು ವರ್ಷಗಳಿಂದಲೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸೂಕ್ತ ಸಮಯಕ್ಕೆ ಮಳೆ ಬರುತ್ತಿಲ್ಲ. ದಿನದಲ್ಲಿ ಬೀಳುವ ಮಳೆ ಗಂಟೆಗೆ, ವಾರದಲ್ಲಿ ಬೀಳುವ ಮಳೆ ದಿನಕ್ಕೆ, ತಿಂಗಳಲ್ಲಿ ಬೀಳುವ ಮಳೆ ವಾರದಲ್ಲಿ ಬೀಳುವಂತಾಗಿದೆ. ಇದಕ್ಕೆ ಹವಾಮಾನ ವೈಪರಿತ್ಯವೇ ಪ್ರಮುಖ ಕಾರಣ.
ದೆಹಲಿ, ಮುಂಬೈನಲ್ಲಿ ಏಕಕಾಲಕ್ಕೆ ಮುಂಗಾರು ಪ್ರವೇಶ
ನವದೆಹಲಿ/ಮುಂಬೈ: ಆರು ದಶಕದ ನಂತರ ದೇಶದ ರಾಜಧಾನಿ ನವದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈಗೆ ಒಂದೇ ದಿನ ಮುಂಗಾರು ಪ್ರವೇಶಿಸಿದ್ದು, ಎರಡೂ ನಗರಗಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ಸಂಜೆಯಿಂದ ವ್ಯಾಪಕ ಮಳೆ ಸುರಿದಿದೆ. ಈ ಹಿಂದೆ 1961ರ ಜೂನ್ 21ರಂದೇ ದೆಹಲಿ ಮತ್ತು ಮುಂಬೈನಲ್ಲಿ ಮುಂಗಾರು ಆರಂಭ ಆಗಿತ್ತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದಂತೆ ದೆಹಲಿಗೆ ಮಂಗಳವಾರ ಪ್ರವೇಶಿಸಬೇಕಿದ್ದ ಮುಂಗಾರು ಎರಡು ದಿನ ಮೊದಲೇ ಕಾಲಿಟ್ಟಿದೆ. ಆದರೆ, ಮುಂಬೈಗೆ ಎರಡು ವಾರ ತಡವಾಗಿ ಆಗಮಿಸಿದೆ. ಇದಕ್ಕೆ ಅರಬ್ಬಿ ಸಮುದ್ರದಲ್ಲಿ ಎದ್ದಿದ್ದ ಬಿಪರ್ಜಾಯ್ ಚಂಡಮಾರುತ ಕಾರಣ ಎಂದು ಐಎಂಡಿ ಹೇಳಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ದೆಹಲಿಗೆ ಮಳೆ ತಂಪೆರೆದಿದೆ. ಭಾರಿ ಮಳೆಯ ಕಾರಣ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್)ಕ್ಕೆ ಒಳಪಟ್ಟ ಗುರುಗ್ರಾಮದ ರಸ್ತೆಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿದಿದೆ.
ಮುಂಬೈ ಮೂಲಕ ಪ್ರವೇಶ ಪಡೆದಿರುವ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಮಹಾರಾಷ್ಟ್ರದಾದ್ಯಂತ ವಿಸ್ತರಿಸಿದೆ. ಜತೆಗೆ ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನ ಕೆಲ ಭಾಗಗಳಲ್ಲಿ ಮುಂದಿನ ಎರಡು ದಿನ ವ್ಯಾಪಕ ಮಳೆ ಆಗುವ ನಿರೀಕ್ಷೆ ಇದೆ .
- ಮೃತ್ಯುಂಜಯ ಮಹಾಪಾತ್ರ, ಐಎಂಡಿ ಮಹಾನಿರ್ದೇಶಕ
ಕೇದಾರನಾಥ ಯಾತ್ರೆ ಸ್ಥಗಿತ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಚಾರ್ಧಾಮ್ ಯಾತ್ರೆಯ ಭಾಗವಾದ ಕೇದಾರನಾಥ ಯಾತ್ರೆ ಯನ್ನು ಸ್ಥಗಿತಗೊಳಿ ಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಜಾಗೃತವಾಗಿರುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೂಚಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವು: ಭಾರಿ ಮಳೆಯ ಕಾರಣ ನವದೆಹಲಿ ರೈಲು ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶದಿಂದ 34 ವರ್ಷದ ಮಹಿಳೆಯೊಬ್ಬರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿಯಾದ ಸಾಕ್ಷಿ ಅಹುಜಾ ಸಾವನ್ನಪ್ಪಿದವರು. ಇಬ್ಬರು ಮಹಿಳೆಯರು ಮತ್ತು ಮೂರು ಮಕ್ಕಳ ಜತೆ ರೈಲು ನಿಲ್ದಾಣಕ್ಕೆ ಬಂದಿದ್ದರು. ಪ್ರವೇಶ ದ್ವಾರ ಬಳಿ ನೀರು ತುಂಬಿದ್ದ ಗುಂಡಿಯನ್ನು ತಪ್ಪಿಸಲು ಪಕ್ಕದಲ್ಲಿದ್ದ ಲೈಟು ಕಂಬವನ್ನು ಹಿಡಿದುಕೊಂಡರು. ತಕ್ಷಣವೇ ವಿದ್ಯುತ್ ಪ್ರವಹಿಸಿ ಅವರು ಪ್ರಜ್ಞೆ ತಪ್ಪಿ ಬಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ.
ಪ್ರವಾಹ ಪೀಡಿತ ಅಸ್ಸಾಂಗೆ ಕೇಂದ್ರದ ನೆರವು: ಪ್ರವಾಹ ಪೀಡಿತ ಅಸ್ಸಾಂನ ಸ್ಥಿತಿಗತಿ ಬಗ್ಗೆ ಸಿಎಂ ಹೇಮಂತ್ ಬಿಸ್ವಾ ಶರ್ವರಿಂದ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಅಸ್ಸಾಂನಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಕಾರಣ 9 ಜಿಲ್ಲೆಗಳಲ್ಲಿ ಅಂದಾಜು ಐದು ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಹೇಳಿದೆ.