ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಜೂನ್ 15ರೊಳಗೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಭರವಸೆ ನೀಡಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
'(ಪ್ರತಿಭಟನಾ ನಿರತ) ಕುಸ್ತಿಪಟುಗಳೊಂದಿಗೆ ಸೇರಿ ಒಂದು ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಅವರ ಬೇಡಿಕೆಯಂತೆ ತನಿಖೆ ಕೈಗೊಳ್ಳಲಾಗುವುದು ಮತ್ತು ಜೂನ್ 15ರ ಒಳಗೆ ಆರೋಪಪಟ್ಟಿ ಸಲ್ಲಿಸಲಾಗುವುದು. ಡಬ್ಲ್ಯುಎಫ್‌ಐ ಚುನಾವಣೆ ಜೂನ್ 30ರೊಳಗೆ ನಡೆಯಲಿದೆ' ಎಂದು ತಿಳಿಸಿದ್ದಾರೆ.
'ಡಬ್ಲ್ಯುಎಫ್‌ಐ ಇನ್ನುಮುಂದೆ, ಮಹಿಳಾ ಮುಖ್ಯಸ್ಥರನ್ನೊಳಗೊಂಡ ಆಂತರಿಕ ದೂರು ಸಮಿತಿಯನ್ನು ಹೊಂದಿರಲಿದೆ' ಎಂದು ಸಹ ಹೇಳಿದ್ದಾರೆ.
ಈ ಎಲ್ಲ ನಿರ್ಧಾರಗಳನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಅವರು, ಧರಣಿಯನ್ನು ಜೂನ್ 15ರ ವರೆಗೆ ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.